ವಿಜಯಪುರ: ಹೆರಿಗೆ ಬಳಿಕ ನಿರ್ಲಕ್ಷ್ಯ ವಹಿಸಿ ಬಾಣಂತಿ ಸಾವಿಗೆ ಕಾರಣರಾದ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಗ್ರಾಹಕ ಆಯೋಗವು 15 ಲಕ್ಷ ರೂ. ದಂಡ ವಿಧಿಸಿತು. ಜಿಲ್ಲೆಯ ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್ ಆಸ್ಪತ್ರೆ ಡಾ.ನಂದಿನಿ ಬನ್ನೂರ, ಜ್ಯೋತಿ ಹೊಸಮನಿ ಹಾಗೂ ಸುನೀತಾ ಬಾವಿಮನಿ ಇವರಿಗೆ ದಂಡ ಹಾಕಲಾಗಿದೆ. ಈ ಪೈಕಿ ಡಾ. ನಂದಿನಿ ಅವರಿಗೆ 11 ಲಕ್ಷ ರೂ. ದಂಡ ತೆರಬೇಕಿದೆ.
ಘಟನೆಯ ಹಿನ್ನೆಲೆ:ಗರ್ಭಿಣಿಯಾಗಿದ್ದ ಜಯಶ್ರೀ 2018 ಜೂ. 3ರಂದು ಹೆರಿಗೆಗಾಗಿ ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ನರ್ಸ್ ರೇಣುಕಾ ಬನ್ನೂರ ತಾವೇ ದಾಖಲು ಮಾಡಿಕೊಂಡಿದ್ದರು. ಬಹಳ ಹೊತ್ತು ವೈದ್ಯರು ಬಾರದ ಕಾರಣ ಸಿಬ್ಬಂದಿ ಜ್ಯೋತಿ ಹೊಸಮನಿ ಹಾಗೂ ಸುನೀತಾ ಭಾವಿಮನಿ ಅವರೇ ಹೆರಿಗೆ ಮಾಡಿಸಿದ್ದರು.
ಜಯಶ್ರೀ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಗರ್ಭಕೋಶ ಹೊರಬಂದಿತ್ತು. ಬೇರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇಲೆ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಜಯಶ್ರೀ ಮೃತಪಟ್ಟಿದ್ದರು. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು.