ವಿಜಯಪುರ: ರಾಜ್ಯದ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಮೇ 18ರ ಒಳಗಾಗಿ ಹೊಸ ಸರ್ಕಾರ ರಚನೆಯಾಗಬೇಕು. ಹೀಗಾಗಿ ಕಾಂಗ್ರೆಸ್ ಪಕ್ಷ ಸಹ ಎರಡು ಹಂತದಲ್ಲಿ ಚುನಾವಣೆ ಪ್ರಚಾರ ಕೈಗೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದರು. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೂ ಸಹ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳನ್ನು ಮತದಾರರಿಗೆ ತಿಳಿಸಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಪ್ರಚಾರ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಪ್ರಚಾರ: ಖರ್ಗೆ ಸೂಚನೆ ಪ್ರಕಾರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಪ್ರಚಾರ ಮಾಡಬೇಕು. ಅಂದರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಹರಿಪ್ರಸಾದ್ ಅವರು, ಎಮ್ ಬಿ ಪಾಟೀಲ್ ಅವರ ಮುಂದಾಳತ್ವದಲ್ಲಿ ಚುನಾವಣೆ ಪ್ರಚಾರವನ್ನು ಬೆಳಗಾವಿಯ ವೀರಸೌಧದಿಂದ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಬೆಳಗಾವಿ ವೀರಸೌಧದಿಂದ ಯಾಕೆ ಚುನಾವಣೆ ಪ್ರಚಾರ ಕೈಗೊಂಡಿದ್ದೇವೆ ಅಂದರೆ ಅದಕ್ಕೊಂದು ಐತಿಹಾಸಿಕವಿದೆ. ಡಿ.26 27 1924ರಂದು ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸ್ಥಳವಾಗಿದೆ. ಹೀಗಾಗಿ ವೀರಸೌಧದಿಂದ ಕಾಂಗ್ರೆಸ್ ಈ ಬಾರಿ ಪ್ರಚಾರವನ್ನು ಶುರು ಮಾಡಿದೆ ಎಂದು ತಿಳಿಸಿದರು.
ಕಾಂಗ್ರೆಸ್ನ ಎರಡು ತಂಡಗಳು ರಾಜ್ಯದಲ್ಲಿ ಪ್ರವಾಸ:ಫೆಬ್ರವರಿ 3 ರಿಂದ ಎರಡು ತಂಡಗಳು ರಾಜ್ಯದಲ್ಲಿ ಪ್ರವಾಸ ಮಾಡಲಿವೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಸವ ಕಲ್ಯಾಣದಿಂದ ಯಾತ್ರೆ ಆರಂಭವಾಗಲಿದೆ. ಪ್ರಜಾಧ್ವನಿ ಬಸ್ ಯಾತ್ರೆ ಕಾರ್ಯಕ್ರಮಗಳನ್ನು ಇದೇ ವೇಳೆ ಪ್ರಕಟಿಸಿದ ಅವರು, 112 ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಫೆಬ್ರವರಿ 11 ರಂದು ಯಾತ್ರೆ ಆಗಮಿಸಲಿದೆ ಎಂದು ಮಾಹಿತಿ ನೀಡಿದರು.