ವಿಜಯಪುರ: ಬಿಜೆಪಿ ಮೊದಲು ತನ್ನ ಪಕ್ಷದ ಒಳಬೇಗುದಿಯನ್ನು ಸರಿಪಡಿಸಿಕೊಳ್ಳಬೇಕು. ಅವರ ತಾಟಿನಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಾಟಿನಲ್ಲಿರುವ ನೊಣದ ಬಗ್ಗೆ ಏಕೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟವಾಗುತ್ತದೆ ಎಂಬ ಬಿಜೆಪಿ ರಾಜ್ಯ ನೂತನ ಅಧ್ಯಕ್ಷ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ನಗರದ ಸೈನಿಕ ಶಾಲಾ ಹೆಲಿಪ್ಯಾಡ್ನಲ್ಲಿ ಸೋಮವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಶಾಸಕಾಂಗ ಸಭೆಯಲ್ಲಿ ಏನೇನು ಆಗಿದೆ ಎಂಬುದನ್ನಾ ನೆನಪು ಮಾಡಿಕೊಳ್ಳಲಿ. ನಮ್ಮ ಬಗ್ಗೆ ಮಾತನಾಡೋದು ಅವಶ್ಯಕತೆಯಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ವಿಧಾನಸಭಾ ಚುನಾವಣೆ ಸಮಯದಲ್ಲಿ ಜೋಡೆತ್ತಾಗಿದ್ದರು. ಪರಿಣಾಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಅಧಿಕಾರಕ್ಕಾಗಿ ಇಬ್ಬರು ಜಗಳ ಮಾಡುತ್ತಿದ್ದಾರೆಂದು ಬಿಜೆಪಿ ವಿನಾ ಕಾರಣ ಆರೋಪ ಮಾಡುತ್ತಿದೆ. ಹಾಗಾದ್ರೆ ಇವರೇನು ಸಿಎಂ ಹಾಗೂ ಡಿಕೆಶಿ ಮಧ್ಯೆ ಜಗಳ ಬಗೆ ಹರಿಸಲು ಹೋಗಿದ್ದರಾ?. ಪ್ರಚಾರಕ್ಕಾಗಿ ವಿನಾ ಕಾರಣ ಹೇಳಿಕೆ ನೀಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ. 136 ಜನ ಶಾಸಕರು ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನೆಮ್ಮದಿಯಾಗಿ ಜನರು ಐದು ಗ್ಯಾರಂಟಿಗಳ ಮೂಲಕ ತೃಪ್ತಿಯಾಗಿದ್ದಾರೆ. ಅದನ್ನು ಅವರಿಗೆ ನೋಡಲಾಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಆಪರೇಷನ್ ಹಸ್ತ ಹಾಗೂ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಇರಲ್ಲ ಎಂಬ ಬಿಜೆಪಿ ಮುಖಂಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸವದಿ, ಹಲವು ಬಿಜೆಪಿಯ ಹಲವು ಅತೃಪ್ತ ನಾಯಕರು ಈಗಾಗಲೇ ನಮ್ಮ ಸಂಪರ್ಕದಲ್ಲಿದ್ದಾರೆ. ಜನವರಿ 26ರ ನಂತರ ಯಾರು ಯಾರನ್ನು ಸೆಳೆಯುತ್ತಾರೆ ಅನ್ನೋದನ್ನು ನೀವೇ ಕಾದು ನೋಡಿ. ಬಿಜೆಪಿ ಇಂದು ಮನೆಯೊಂದು ಮೂರು ಬಾಗಿಲು ಆಗಿದ್ದನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಒಬ್ಬರ ಮುಖ ಮತ್ತೊಬ್ಬರು ನೋಡದಂತಾಗಿದೆ. ಆಂತರಿಕ ಕಲಹ ಬಹಳ ಇದೆ. ಅದು ಯಾವತ್ತೂ ಸರಿ ಆಗಲ್ಲ. ಮುಂದೆ ಬಿಜೆಪಿಗೆ ಭವಿಷ್ಯ ಇಲ್ಲ. ಅದನ್ನು ಅರಿತುಕೊಂಡೇ ನಾನು ಬಿಜೆಪಿ ಬಿಟ್ಟು ಬಂದಿದ್ದೇನೆ. ನೋಡೋಣ, ಮುಂದೆ ನೀವು ಇರುತ್ತೀರಿ, ನಾನು ಇರುತ್ತೇನೆ. ಯಾರು ಯಾರನ್ನು ಸೆಳೆಯುತ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ ಎಂದರು.