ವಿಜಯಪುರ:ನಿನ್ನೆಯಷ್ಟೇರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿದಿದ್ದು, ಇಷ್ಟು ದಿನ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ ಮತಬೇಟೆ ನಡೆಸಿದ್ದರು. ಈಗ ಚುನಾವಣೆ ಮುಗಿದಿದ್ದು, ಮೇ 13 (ಶನಿವಾರ) ಫಲಿತಾಂಶ ಹೊರಬೀಳಲಿದೆ. ಅಭ್ಯರ್ಥಿಗಳು ತಮ್ಮ ರಾಜಕೀಯ ಭವಿಷ್ಯ ಏನಾಗುತ್ತದೆ ಎನ್ನುವ ಆತಂಕದಲ್ಲಿಯೇ ತಮ್ಮ ತಮ್ಮ ನಿವಾಸದಲ್ಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸಹ ತಮ್ಮ ನಿವಾಸದಲ್ಲಿ ಪತ್ನಿ ಜತೆ ಚಹಾ ಕುಡಿಯುತ್ತ ರಿಲ್ಯಾಕ್ಸ್ ಮಾಡ್ನಲ್ಲಿದ್ದರು. ಮತದಾನ ಕುರಿತು ಕಾರ್ಯಕರ್ತರು ಹಾಗೂ ಬೆಂಬಲಿಗರ ಜತೆ ನಿನ್ನೆ ರಾತ್ರಿ ಸಭೆ ನಡೆಸಿ ಎಲ್ಲೆಲ್ಲಿ ಹೇಗೆಲ್ಲಾ ಮತದಾನ ಆಗಿದೆ ಎಂದು ಮಾಹಿತಿ ಕಲೆ ಹಾಕಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಬಲೇಶ್ವರ ಕ್ಚೇತ್ರದಲ್ಲಿ ಒಳ್ಳೆ ಲೀಡ್ನಲ್ಲಿ ಆಯ್ಕೆಯಾಗುವೆ. ದೊಡ್ಡ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ 120 ರಿಂದ 140 ಸ್ಥಾನಗಳಲ್ಲಿ ಗೆಲ್ಲಲಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರು ಸಹ ಹೆಚ್ಚು ಸ್ಥಾನ ಗೆಲ್ಲೋದಾಗಿ ಹೇಳಿದ್ದಾರೆ. ಎಲ್ಲ ಸಮೀಕ್ಷೆಗಳು ನಮ್ಮ ಪರವಾಗಿಯೇ ಇದೆ, ಜನರು ನೀಡಿದ ತೀರ್ಪಿನ ಆಧಾರದ ಮೇಲೆ ಸಮೀಕ್ಷೆ ನಡೆಯುವ ಕಾರಣ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2013-18 ರಲ್ಲಿ ನಮ್ಮ ಸರ್ಕಾರ ಹಾಗೂ ಈಗಿನ ಸರ್ಕಾರ ಹೇಗೆ ಕೆಲಸ ಮಾಡಿದೆ ಎಂಬುದು ಜನರಿಗೆ ಗೊತ್ತಾಗಿದೆ, ಹಲವಾರು ಭಾಗ್ಯ, ರೈತರಿಗೆ ಯೋಜನೆ, ಯುವ ಜನರಿಗೆ ಯೋಜನೆ ನೀಡಿದ್ದೇವೆ. ಈಗಾಗಲೇ ಜನ ತೀರ್ಮಾನ ಮಾಡಿದ್ದಾರೆ ಎಂದರು.
ಪ್ರಧಾನಿ ಮೋದಿ ಪ್ರಭಾವ ಇಲ್ಲ:ಜನ ಬೆಲೆ ಏರಿಕೆ ಬಗ್ಗೆ ಜಾಗೃತರಾಗಿದ್ದಾರೆ. ಕಳೆದ 9 ವರ್ಷದಲ್ಲಿ ಅವರೇ ಮಾತು ಕೊಟ್ಟಂತೆ 18 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು ಆದ್ರೆ ಅದು ಆಗಿಲ್ಲ, ನೋಟ್ ಬ್ಯಾನ್, ಉದ್ಯೋಗ ಕಡಿತ ಬೆಲೆ ಏರಿಕೆ, ರೈತರ ಆದಾಯ ದುಪ್ಪಟ್ಟಾಗಿಲ್ಲ, ರಸಗೊಬ್ಬರ ಔಷಧಿ ಬೆಲೆ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು. ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸುಮಾರು 72 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದರು. ಆದರೆ ಮೋದಿ ಅವರು ಉದ್ದಿಮೆದಾರರ 20 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಮೋದಿ ಮೋಡಿ, ಮೋದಿ ಮ್ಯಾಜಿಕ್ ನಡೆದಿಲ್ಲ ಎಂದು ಎಂ ಬಿ ಪಾಟೀಲ್ ಹೇಳಿದರು.