ವಿಜಯಪುರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಬಗ್ಗೆ ಕಾಂಗ್ರೆಸ್ನವರು ಅಪಪ್ರಚಾರ ಮಾಡುತ್ತಿದ್ದಾರೆ, ಮಾಡಲಿ ಬಿಡಿ. ಆದರೆ, ಕಾಂಗ್ರೆಸ್ನಲ್ಲಿಯೇ ಒಳಜಗಳ ಹೆಚ್ಚಾಗಿದೆ. ಇದು ಬಿಜೆಪಿಗೆ ಶೇ.100ರಷ್ಟು ಲಾಭ ಪಡೆಯಲಿದೆ. ಜಗಳ ಅವರದ್ದು, ಲಾಭ ನಮ್ಮದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.
ವಿಜಯಪುರದಲ್ಲಿ ಗೋ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಕೇಂದ್ರದಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಕೆಲಸ ನಡೆಸುತ್ತಿರುವ ಕಾರಣ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ನೇಮಕಾತಿಗೆ ಕಾನೂನು ತೊಡಕು: ಪಶು ಇಲಾಖೆಯಲ್ಲಿ ಒಂದು ಸಾವಿರ ಹುದ್ದೆಗಳು ಖಾಲಿ ಇದ್ದವು. ಅದರಲ್ಲಿ ಈಗಾಗಲೇ 400 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನೂ ಬಾಕಿ ಇರುವ ಹುದ್ದೆಗಳ ನೇಮಕಾತಿ ಮಾಡಲು ಸರ್ಕಾರ ಸಿದ್ದವಿದೆ. ಆದರೆ, ಕೆಲವರು ಈ ವಿಚಾರವಾಗಿ ಕಾನೂನು ಹೋರಾಟ ಮಾಡುತ್ತಿರುವ ಕಾರಣ ಹುದ್ದೆಗಳ ಭರ್ತಿ ವಿಳಂಬವಾಗುತ್ತಿದೆ ಎಂದು ಪ್ರಭು ಚವ್ಹಾಣ್ ಹೇಳಿದರು.