ಗೋಲಗುಮ್ಮಟಕ್ಕೆ ಹರಿದು ಬರುತ್ತಿದೆ ಜನಸಾಗರ ವಿಜಯಪುರ:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆ ಮೂಲಕ ಜನರನ್ನು ಸೆಳೆದು ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆ ಮಾಡಿದೆ. ಅಧಿಕಾರ ವಹಿಸಿಕೊಂಡ ಮೇಲೆ ಮೊದಲು ಜಾರಿ ಮಾಡಿರುವ ಶಕ್ತಿ ಯೋಜನೆಯಿಂದ ಪ್ರವಾಸಿ ತಾಣಗಳ ವೀಕ್ಷಣೆಗೆ ಜನಸಾಗರವೇ ಹರಿದು ಬರುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕೆಎಸ್‌ಆರ್‌ಟಿಸಿಗೆ ಆದಾಯ ತಂದಿದೆ. ಇದರ ಜತೆಗೆ ಪ್ರವಾಸಿ ತಾಣಗಳ ಆದಾಯವನ್ನು ಸಹ ಹೆಚ್ಚಳ ಮಾಡಿದೆ.
ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ಕಳೆದ ಜೂನ್ ತಿಂಗಳಲ್ಲಿ 16,665 ಜನ ಪ್ರಯಾಣಿಕರು ಹೆಚ್ಚುವರಿಯಾಗಿ ಆಗಮಿಸಿದ್ದಾರೆ. ಇದರ ಪರಿಣಾಮ ಭಾರತೀಯ ಪುರಾತತ್ವ ಇಲಾಖೆಗೆ ಒಂದೇ ತಿಂಗಳು 4,16,625 ಲಕ್ಷ ರೂ. ಆದಾಯ ಹರಿದು ಬಂದಿದೆ. ಇದು ಅಲ್ಲದೇ ಜುಲೈ ತಿಂಗಳು 15ರೊಳಗೆ ಗೋಳಗುಮ್ಮಟ ವೀಕ್ಷಣೆಗೆ ಗರಿಷ್ಠ ಪ್ರಯಾಣಿಕರು ಭೇಟಿ ನೀಡಿದ್ದಾರೆ. ರಜೆ ದಿನಗಳು, ಹಬ್ಬ ಹರಿದಿನ ಸೇರಿ 4 ದಿನ ರಜೆ ಇದ್ದ ಕಾರಣ ಭಾರತೀಯ ಪುರಾತತ್ವ ಇಲಾಖೆ ಮಾಹಿತಿಯಂತೆ 56,992 ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರ ಪರಿಣಾಮ ಕೇವಲ 15 ದಿನಗಳಲ್ಲಿ 14,24,800 ರೂ. ಆದಾಯ ಗಳಿಸಿದೆ.
ಕಳೆದ ವರ್ಷ 2022ರ ಜೂನ್‌ನಲ್ಲಿ ಒಟ್ಟು 70.818 ಪ್ರಯಾಣಿಕರು ಗೋಳಗುಮ್ಮಟ ವೀಕ್ಷಣೆಗೆ ಆಗಮಿಸಿದ್ದರು. ಈ ವರ್ಷ 2023 ಜೂನ್ ಒಂದು ತಿಂಗಳಲ್ಲಿ 87,483 ಜನ ಪ್ರಯಾಣಿಕರು ಭೇಟಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 16,665 ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಆದರೆ ವಿದೇಶಿಯರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷ ಜೂನ್‌ನಲ್ಲಿ 15 ವಿದೇಶಿಗರು ಭೇಟಿ ನೀಡಿದ್ದರೆ, ಈ ವರ್ಷ 18 ವಿದೇಶಿಗರು ಗೋಳಗುಮ್ಮಟ ವೀಕ್ಷಣೆಗೆ ಆಗಮಿಸಿದ್ದರು.
ಇನ್ನು ಗೋಳಗುಮ್ಮಟ ಹೊರತುಪಡಿಸಿ ವಿಜಯಪುರದಲ್ಲಿರುವ ಇಬ್ರಾಹಿಂ ರೋಜಾ ವೀಕ್ಷಣೆಗೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಇಲ್ಲಿಯೂ ಸಹ ಅಲ್ಪ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಭಾರತೀಯ ಪುರಾತತ್ವ ಇಲಾಖೆ ಮಾಹಿತಿಯಂತೆ 3, 97,875 ಲಕ್ಷ ರೂ. ಆದಾಯ ಗಳಿಸಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ 12,447 ಪ್ರಯಾಣಿಕರು ಭೇಟಿ ನೀಡಿದ್ದರು. ಈ ವರ್ಷ 3 ಸಾವಿರ ಜನ ಪ್ರಯಾಣಿಕರು ಹೆಚ್ಚುವರಿಯಾಗಿ ಭೇಟಿ ನೀಡಿದ್ದಾರೆ.
ಉಚಿತ ಪ್ರಯಾಣ ಭಾಗ್ಯದಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಪುರದ ಗೋಳಗುಮ್ಮಟ ವೀಕ್ಷಣೆಗೆ ಆಗಮಿಸಿದ್ದಾರೆ. ಇನ್ನು, ಕೆಲ ಹೊರ ರಾಜ್ಯದ ಪ್ರಯಾಣಿಕರು ಸಹ ಕುಟುಂಬ ಸಮೇತವಾಗಿ ಪ್ರವಾಸ ಕೈಗೊಂಡು ಗೋಳಗುಮ್ಮಟ ವೀಕ್ಷಣೆ ಮಾಡಿದ್ದಾರೆ. ಹೀಗಾಗಿ ಪ್ರವಾಸಿ ತಾಣಗಳು ಈಗ ಭರ್ತಿಯಾಗಿವೆ. ಇನ್ನೂ ಒಂದು ತಿಂಗಳು ಕಾಲ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುತ್ತಿದ್ದಾರೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು. ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಸಹಜವಾಗಿ ಕಡಿಮೆ ಇರುತ್ತದೆ. ಆದರೆ ಈ ಬಾರಿ ಮುಂಗಾರು ಚುರುಕುಗೊಳ್ಳದ ಕಾರಣ ಬೇರೆ ಜಿಲ್ಲೆ, ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ಗೋಳಗುಮ್ಮಟ ವೀಕ್ಷಣೆಗೆ ಬರುತ್ತಿದ್ದಾರೆ.
ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದ್ದು, ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ನಾವು ರಾಜ್ಯದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗಿದೆ. ಇದರ ಜತೆ ಪುರುಷರಿಗೂ ಉಚಿತ ಪ್ರಯಾಣ ಕಲ್ಪಿಸಿದ್ದರೆ, ಕುಟುಂಬ ಸಮೇತ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಿತ್ತು. ಈಗ ನಾನು ನಮ್ಮ ಪತಿ, ಮಕ್ಕಳ ಜತೆ ಬಂದಿದ್ದೇನೆ. ಗೋಳಗುಮ್ಮಟ ವೀಕ್ಷಣೆಗೆ 25 ರೂಪಾಯಿ ಚಾರ್ಜ್ ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಒಂದು ಕಡೆ ಉಚಿತ ಎಂದು ಹೇಳಿ ಇನ್ನೊಂದು ಕಡೆ ಈ ರೀತಿ ಬೆಲೆ ಏರಿಸಿ ಕಸಿದುಕೊಳ್ಳುತ್ತಿದ್ದಾರೆ ಎಂದು ದಾವಣಗೆರೆಯ ಶೋಭಾ ಎಂ ವಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ:ಶಕ್ತಿ ಬಂದ ನಂತರ ಸಾರಿಗೆ ಸಂಸ್ಥೆ ಆದಾಯ ವೃದ್ಧಿಸಿದೆ: ಕೃಷ್ಣ ಬೈರೇಗೌಡ