ವಿಜಯಪುರ: ಮಹಿಳೆಯರು ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯನ್ನು ಕಾಂಗ್ರೆಸ್ ಅಂದುಕೊಂಡಂತೆ ಭಾನುವಾರ ಜಾರಿಗೊಳಿಸಿದ್ದು, ಅದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ್ ಕರೆ ನೀಡಿದರು.
ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಆಶ್ರಯದಲ್ಲಿ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು, ಉದ್ಯೋಗಸ್ಥ ಮಹಿಳೆಯರಿಗೆ ಶಕ್ತಿ ಯೋಜನೆ ಅತ್ಯಂತ ಸಹಕಾರಿ ಆಗಲಿದ್ದು, ಶರಣರ ಆಶಯದಂತೆ ಮಹಿಳಾ ಸಮಾನತೆಯತ್ತ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಬ್ರಿಟಿಷರ್ ವಿರುದ್ದ ಹೋರಾಡಿದ ಧೀರ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರನ್ನು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕಿಡಲಾಗುವುದು ಎಂದು ತಿಳಿಸಿದರು.
ನಮ್ಮ ಸರ್ಕಾರ ನೀಡಿದ 5 ಗ್ಯಾರಂಟಿಗಳಲ್ಲಿ ಪ್ರಥಮವಾಗಿ ಇಂದು ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ಚಾಲನೆ ದೊರೆತಿದೆ. ಸರ್ಕಾರ ನೀಡಿರುವ ಎಲ್ಲ ಭರವಸೆಗಳನ್ನು ಯಾವುದೇ ಅಡೆ-ತಡೆ ಇಲ್ಲದೇ, ರಾಜ್ಯದ ಅಭಿವೃದ್ಧಿಗೆ ಯಾವುದೇ ಬಾಧೆಯಾಗದಂತೆ ಜಾರಿಗೊಳಿಸಲಾಗುವುದು. ಈ ಕುರಿತು ಯಾವುದೇ ಗೊಂದಲ ಮೂಡಿಸುವ ಅಗತ್ಯವಿಲ್ಲ ಎಂದರು.
ಗ್ಯಾರಂಟಿ ಜಾರಿಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ. 12 ರಿಂದ 13 ಸಲ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆರ್ಥಿಕ ತಜ್ಞರೆಂದರೆ ತಪ್ಪಾಗಲಾರದು. ರಾಜ್ಯದ ಸಮಗ್ರ ಅಭಿವೃದ್ದಿಯ ಸವಾಲನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಎಲ್ಲ ಗ್ಯಾರಂಟಿಗಳು, ಯೋಜನೆಗಳ ಜಾರಿ, ರಾಜ್ಯದ ಅಭಿವೃದ್ಧಿಯ ಸಮತೋಲನ ಮಾಡಿ ಯಾವುದೇ ಗೊಂದಲವಿಲ್ಲದೇ ಅಭಿವೃದ್ಧಿ ಜೊತೆಗೆ ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯವನ್ನು ಅಭಿವೃದ್ದಿಪಥದಲ್ಲಿ ಕೊಂಡೊಯ್ಯಲಾಗುವುದು ಎಂದು ಆಶಾಭಾವನೆ ವ್ಯಕ್ತಪಡಿಸಿದರು.