ವಿಜಯಪುರ :ನಡೆದಾಡುವ ದೇವರು, ಶತಮಾನದ ಸಂತ, ಸರಳತೆಯ ಸಾಕಾರ ಮೂರ್ತಿ ಎಂದೇ ಖ್ಯಾತರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳ ನುಡಿನಮನ ಕಾರ್ಯಕ್ರಮ ಇಂದು ಜ್ಞಾನಯೋಗಾಶ್ರಮದಲ್ಲಿ ನಡೆಯಿತು. ಇಂದು ಆಶ್ರಮಕ್ಕೆ ಮಾಜಿ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿ ಹಿರಿಯ ಶ್ರೀಗಳ ಪ್ರಣವ ಮಂಟಪದ ದರ್ಶನ ಪಡೆದರು. ಜೊತೆಗೆ ಶ್ರೀ ಸಿದ್ದೇಶ್ವರ ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದೇಶ್ವರ ಸ್ವಾಮೀಜಿ ಪಾಠ ಪ್ರವಚನಗಳಿಂದ ಸುಧಾರಣೆಗೊಂಡ ಸಾಕಷ್ಟು ಜನ ನಮ್ಮೊಂದಿಗಿದ್ದಾರೆ. ಸಿದ್ದೇಶ್ವರ ಶ್ರೀಗಳನ್ನು ನಡೆದಾಡುವ ದೇವರು ಎಂದರೂ ತಪ್ಪಾಗಲಾರದು. ಅವರ ಪ್ರವಚನವನ್ನು ಬಹಳ ಮಂದಿ ಕೇಳುತ್ತಿದ್ದರು. ನುಡಿದಂತೆ ನಡೆಯುತ್ತಿದ್ದ ಅವರು ಸ್ವಾಮೀಜಿಗಳಲ್ಲೇ ಅಗ್ರಸ್ಥಾನದಲ್ಲಿ ನಿಂತಿದ್ದರು. ಅವರ ಮೇಲಿನ ಭಕ್ತಿ, ಗೌರವದಿಂದ ಇಂದು ಇಲ್ಲಿಗೆ ಬಂದು ಶ್ರೀಗಳ ಆಶ್ರಮಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದುಕೊಂಡಿದ್ದೇನೆ ಎಂದು ಹೇಳಿದರು.
ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿ ಜನವರಿ 2ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಸಂಬಂಧ ಜಿಲ್ಲೆಯಾದ್ಯಂತ ಕಳೆದ ಡಿಸೆಂಬರ್ 23ರಿಂದ 31ರ ವರೆಗೆ ಗುರುನಮನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ವಿಚಾರಗೋಷ್ಠಿಗಳು ನಡೆದಿದ್ದವು. ಸೋಮವಾರ ಆಶ್ರಮದಲ್ಲಿ ಯೋಗನಮನದ ಜೊತೆಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಲವು ಮಠದ ಸ್ವಾಮೀಜಿಗಳು, ರಾಜಕೀಯ ನಾಯಕರು, ಸಾರ್ವಜನಿಕರು ಪಾಲ್ಗೊಂಡು ತಮ್ಮ ನುಡಿನಮನ ಸಲ್ಲಿಸಿದರು. ಇಂದು ಮತ್ತು ನಾಳೆ ನುಡಿನಮನ ಕಾರ್ಯಕ್ರಮ ನಡೆಯಲಿದೆ.