ವಿಜಯಪುರ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನೂತನ ಪಕ್ಷ ವಿಚಾರವಾಗಿ ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆಯಬೇಕು ಎಂಬುದಷ್ಟೇ ಮುಂದಿನ ಗುರಿ, ಯಾರು ಪಕ್ಷ ಮಾಡಿದರು, ಯಾರು ಪಕ್ಷ ಬಿಟ್ಟರು? ಎಂಬುದರ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿದರು.
ಇನ್ನು, ಕೆಲವು ನಾಯಕರುಗಳು ಪಕ್ಷ ಬಿಟ್ಟು ಹೋಗುವವರೂ ಇದ್ದಾರೆ, ಹೊಸದಾಗಿ ಪಕ್ಷಕ್ಕೆ ಬರುವವರು ಇದ್ದಾರೆ. ಕೆಲವೊಂದಿಷ್ಟು ಮಂದಿ ಪ್ರಾಣ ಹೋದರು ಸೋನಿಯಾಗಾಂಧಿ ಅವರನ್ನು ಬಿಟ್ಟು ಬೇರೆ ಪಕ್ಷ ಸೇರೋದಿಲ್ಲ ಎಂದು ನಾಟಕ ಮಾಡುತ್ತಾರೆ. ಅಲ್ಲಿ ದೆಹಲಿಗೆ ಹೋಗಿ ನಾವು ಬಿಜೆಪಿ ಸೇರ್ತಿವಿ ಎಂದು ಇಲ್ಲಿಯವರೇ ಒಂದಿಬ್ಬರು ಓಡಾಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ ಎಂದು ತಿಳಿಸಿದರು.
ಮೀಸಲಾತಿ ಭರವಸೆ ನೀಡಿದ್ದಾರೆ:2ಎ ಮೀಸಲಾತಿಯಲ್ಲಿ ಬರುವ 102 ಸಮಾಜಗಳಿಗೆ ಯಾವುದೇ ರೀತಿ ತೊಂದರೆ ಆಗದ ಹಾಗೇ ಹೊಸ ಸೂತ್ರವನ್ನು ರಚಿಸಿ ನಮ್ಮ ಪಂಚಮಸಾಲಿ ಸಮಾಜ, ಕೂಡು ಒಕ್ಕಲಿಗ, ಆದಿಬಣಜಿಗ ಸಮಾಜಗಳು 2ಎ ಮೀಸಲಾತಿ ಕೊಡುವಂತಹದ್ದು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಶೇ10ರಷ್ಟು ಒಬಿಸಿ ಮೀಸಲಾತಿಯಲ್ಲಿ ಇಡೀ ವೀರಶೈವ ಲಿಂಗಾಯತ ಸಮುದಾಯವನ್ನು ಮೀಸಲಾತಿಗೆ ಶಿಪಾರಸು ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಆಣೆ ಮಾಡಿದ್ದಾರೆ: ರಾಜ್ಯದಲ್ಲಿ ಮೀಸಲಾತಿ ಘೋಷಣೆ ಆಗುವ ಭರವಸೆ ಇದೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು. 2ಎ ಗೆ ಸಮಾನವಾದ ಮೀಸಲಾತಿ ಸಿಗುತ್ತದೆ, ಪಂಚಮಸಾಲಿ 2ಎ ಮೀಸಲಾತಿ ಸಿಎಂ ಬಸವರಾಜ ಬೊಮ್ಮಾಯಿ ನೀಡುವುದಾಗಿ ಆಣೆ ಮಾಡಿದ್ದಾರೆ. ತಾಯಿ ಆಣೆ ಮಾಡಿದ ಮೇಲೆ ಕೊಡಲಿಲ್ಲ ಅಂದರೆ ಏನು ಆಗುತ್ತದೆ ನೋಡಿ ಎಂದರು. ಈಗಾಗಲೇ ಬೇರೆ ಸಮುದಾಯಗಳಿಗೆ ಮೀಸಲಾತಿಯನ್ನು ನೀಡಿದ್ದಾರೆ, ತಳವಾರ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕೊಟ್ಟಿದ್ದಾರೆ, ಮುಖ್ಯಮಂತ್ರಿಗಳು ನಮ್ಮ ಸಮುದಾಯಕ್ಕೂ ಮೀಸಲಾತಿ ಕೊಡುತ್ತಾರೆ ಎಂಬ ಭರವಸೆ ಇದೆ ಎಂದು ಯತ್ನಾಳ್ ತಿಳಿಸಿದರು.
ವಚನ ಭ್ರಷ್ಟತೆ ಇರುತ್ತದೆ, ಅದಕ್ಕಾಗಿ ಸಿಎಂ ಭರವಸೆ ಈಡೇರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಮೀಸಲಾತಿ ಕೇಳಿದ ನಂತರ ಬೇರೆ ಬೇರೆ ಸಮಾಜದವರು ಮೀಸಲಾತಿ ಕೇಳಬಹುದು ಎಂದರು.