ವಿಜಯಪುರ:ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಡುವ ಠೇವಣಿ ಹಣವನ್ನು ಸಹಕಾರಿ ಬ್ಯಾಂಕುಗಳಲ್ಲಿಯೇ ತೊಡಗಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ನಡೆದ ಅಖಿಲ ಭಾರತ ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರಿ ಬ್ಯಾಂಕುಗಳು ಸುಸ್ಥಿರವಾಗಿರಬೇಕು ಆಗ ಮಾತ್ರ ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ರೈತರಿಗೆ ಸಕಾಲದಲ್ಲಿ ಸಾಲ ಸಿಕ್ಕರೆ ವ್ಯವಸಾಯ ಮಾಡಲು ಅನುಕೂಲವಾಗುತ್ತದೆ ಜತೆಗೆ ಉತ್ಪಾದನೆಯೂ ಹೆಚ್ಚಾಗಲಿದೆ. ಈ ಹಿಂದೆಯೂ ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲವನ್ನು 50 ಸಾವಿರದವರಗೆ ಮನ್ನಾ ಮಾಡಲಾಗಿತ್ತು. ಇದರಿಂದ ಸಹಕಾರಿ ಸಂಘಗಳು ಹಾಗೂ ಸಹಕಾರ ಬ್ಯಾಂಕುಗಳಿಗೆ ಹೆಚ್ಚಿನ ಬಲ ಸಿಕ್ಕಿತು ಎಂದ ಹೇಳಿದರು.
ನಬಾರ್ಡ್ ಹಾಗೂ ಪ್ರಧಾನಿಗೆ ಪತ್ರ:ಈ ಬಾರಿ ಬಜೆಟ್ ಮಂಡಿಸಿದ ವೇಳೆ 0% ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಏರಿಸುವ ಕೆಲಸ ಮಾಡಿದ್ದೇವೆ. ಈ ಬಗ್ಗೆ ಪ್ರಧಾನಿ ಅವರಿಗೆ ಹಾಗೂ ನಬಾರ್ಡನವರಿಗೂ ಸಾಲ ಕೊಡುವಂತೆ ಪತ್ರ ಬರೆಯುತ್ತೇನೆ. ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ 3 ಲಕ್ಷದವರೆಗೆ ಶೇ.3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಈಗ ಅದನ್ನು ಬಡ್ಡಿ ರಹಿತವಾಗಿ 3-5 ಲಕ್ಷದವರೆಗೆ ಸಾಲ ನೀಡುವ ಕೆಲಸ ಮಾಡಲಾಗಿದೆ. ಶೇ 3 ರಷ್ಟು ಬಡ್ಡಿಯನ್ನು 15 ಲಕ್ಷ ಆಗುವವರೆಗೆ ಮಾತ್ರ ನೀಡಬೇಕು ಎಂದರು.
ಬಡತನ, ಅಸಮಾನತೆ ಹೊಗಲಾಡಿಸಲು ಅನೇಕ ಕಾರ್ಯಕ್ರಮ: ಸಮಾಜದಲ್ಲಿನ ಬಡತನ, ಅಸಮಾನತೆ ಹೋಗಲಾಡಿಸಲು ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಶಕ್ತಿ ಯೋಜನೆಯಡಿ 1 ಕೋಟಿ ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಸಣ್ಣಪುಟ್ಟ ದೋಷಗಳ ಹೊರತಾಗಿಯೂ ನೂರಕ್ಕೆ 90 ಭಾಗ ಬಡ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರಿಗೆ ಈ ಕಾರ್ಯಕ್ರಮ ರೂಪಿಸಿ ಆರ್ಥಿಕ ಶಕ್ತಿಯನ್ನು ತುಂಬಲಾಗಿದೆ. ಸಹಕಾರ ಕ್ಷೇತ್ರ ಹೇಗೆ ಜಾತಿ ಧರ್ಮಗಳಿಂದ ಹೊರತಾಗಿದೆಯೋ ಅದೇ ರೀತಿ ನಮ್ಮ ಕಾರ್ಯಕ್ರಮಗಳು ಎಲ್ಲ ಧರ್ಮಗಳ ಜನರಿಗೆ ಕೊಟ್ಟಿದ್ದೇವೆ ಎಂದು ಹೇಳಿದರು.
ಬರಗಾಲವನ್ನು ಸಮರ್ಥವಾಗಿ ನಿಭಾಯಿಸುತ್ತೇವೆ:12 ರಾಜ್ಯಗಳಲ್ಲಿ ಬರಗಾಲವಿದ್ದು, ಕರ್ನಾಟಕದಲ್ಲಿ 223 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಬರ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸುವ ಕೆಲಸವನ್ನು ನಮ್ಮ ಸಂಸದರು ಮಾಡಬೇಕು. ಕುಡಿಯುವ ನೀರಿಗೆ ಸಮಸ್ಯೆಯಾಗಬಾರದೆಂದು ಡಿಸಿ, ಸಿಇಒಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳ ಬಳಿ 800 ಕೋಟಿ ರೂ.ಗಳು ಲಭ್ಯವಿದೆ. ಉಳಿದಂತೆ ಹಸುಗಳಿಗೆ ಮೇವು, ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ಈಗಾಗಲೇ 800 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಬರಗಾಲವನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತದೆ ಎಂದು ಭರವಸೆ ನೀಡಿದರು.