ವಿಜಯಪುರ: ಈ ಬಾರಿ ರಾಜ್ಯದಲ್ಲಿ ಮಳೆ ವಾಡಿಕೆಗಿಂತ ಕಡಿಮೆಯಾಗಿದೆ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಬರ ಕುರಿತು ಈಗಾಗಲೇ ಚರ್ಚೆ ನಡೆಸಿ, ಜಂಟಿ ಸರ್ವೆ ಸಹ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಕೃಷ್ಣಾ ನದಿಗೆ ನಿರ್ಮಿಸಲಾದ ಜಲಾಶಯಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಜಂಟಿಯಾಗಿ ಶನಿವಾರ ಗಂಗಾ ಪೂಜೆ ಮತ್ತು ಬಾಗಿನ ಅರ್ಪಿಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸುಮಾರು 113ಕ್ಕೂ ಹೆಚ್ಚು ತಾಲೂಕಗಳಲ್ಲಿ ಬರ ಆವರಿಸಿದೆ. ಇದಕ್ಕೆ ಮತ್ತೆ 73 ತಾಲೂಕು ಸೇರ್ಪಡೆಯಾಗಬಹುದು. ಸೆಪ್ಟಂಬರ್ 4 ರಂದು ಈ ಬಗ್ಗೆ ಸಭೆ ನಡೆಸಲಾಗುವುದು. ಸಭೆಯಲ್ಲಿ ಎಷ್ಟು ತಾಲೂಕು ಬರ ಎಂದು ಘೋಷಣೆ ಮಾಡಲಾಗುತ್ತದೆ. ಬರ ವಿಚಾರದಲ್ಲಿ ಕೇಂದ್ರಕ್ಕೂ ಮನವಿ ಸಲ್ಲಿಸಲಾಗುವುದು. ಎನ್ಡಿಆರ್ಎಫ್ ನಿಯಮದ ಪ್ರಕಾರ ಬರ ಪರಿಹಾರ ಸಿಗಲಿದೆ. ನಿಯಮ ಬದಲಾವಣೆ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದ ಜೀವ ನದಿ ಎಂದೆ ಕರೆಸಿಕೊಳ್ಳುವ ಕೃಷ್ಣಾ ನದಿಯು, ಉತ್ತರ ಕರ್ನಾಟಕದ ಜನರ ಜೀವನವನ್ನು ಸಮೃದ್ಧಿಗೊಳಿಸಲಿ ಎಂದು ಹಾರೈಸಿದ ಸಿಎಂ, ನೀರಾವರಿಗಾಗಿ ಬಜೆಟ್‌ನಲ್ಲಿ 21000 ಕೋಟಿ ಮೀಸಲು ಇಡಲಾಗಿದೆ. ಭದ್ರಾ ಯೋಜನೆಗೆ 5300 ಕೋಟಿ ಕೇಂದ್ರದಿಂದ ಬರಬೇಕು. ಆದರೆ, ಕೇಂದ್ರ ಈವರೆಗೂ ಹಣ ನೀಡಿಲ್ಲ. ಹಾಗಾಗಿ, ಕೆಲವು ಕಾರಣಗಳಿಂದ 3ನೇ ಹಂತದ ಯೋಜನೆಗೆ ಅಡ್ಡಿಯಾಗಿದೆ ಎಂದರು.