ವಿಜಯಪುರ:ಹಿಂದೆಂದೂ ಕಂಡರಿಯದ ಪ್ರವಾಹ ಎದುರಿಸುತ್ತಿರುವ ಜಿಲ್ಲೆಯ ಅನ್ನದಾತನ ಸಂಕಷ್ಟ ಅರಿಯಲು ಪ್ರವಾಹ ಪೀಡಿತ ಸ್ಥಳಕ್ಕೆ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಸಿಎಂ ಆಗಮನ ಹಿನ್ನೆಲೆ ಜಿಲ್ಲೆಯ ರೈತರಲ್ಲಿ ಆಶಾಭಾವನೆ ಮೂಡಿದ್ದು, ಪ್ರವಾಹ ಪೀಡಿತರಿಗೆ ವಿಶೇಷ ಪ್ಯಾಕೇಜ್ ಘೋಷಿಸುತ್ತಾರೆ ಎನ್ನುವ ನಿರೀಕ್ಷೆ ಹೊಂದಿದ್ದಾರೆ.
ಮಹಾರಾಷ್ಟ್ರದ ಉಜನಿ ಹಾಗೂ ವೀರಾ ಜಲಾಶಯಗಳಿಂದ ಬೇಕಾಬಿಟ್ಟಿ ನೀರು ಹರಿಸಿದ್ದರಿಂದ ಭೀಮಾ ನದಿಯ 8 ಸೇತುವೆಗಳು ಮುಳುಗಡೆಯಾಗಿವೆ. ಹಲವು ಗ್ರಾಮಗಳು ಜಲಾವೃತಗೊಂಡಿವೆ. ನದಿ ತಟದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮನೆ-ಮಠ ಹಾಗೂ ಹಲವು ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಿರಾಶ್ರಿತ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ಇವರ ಸಂಕಷ್ಟಕ್ಕೆ ಸ್ಪಂದಿಸಲು ನಾಡಿನ ದೊರೆ ನಾಳೆ ಪ್ರವಾಹ ಪೀಡಿತ ಭೀಮಾ, ಕೃಷ್ಣಾ ಮತ್ತು ಡೋಣಿ ನದಿಗಳಿಂದ ಹಾಳಾಗಿರುವ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
825 ಕೋಟಿ ರೂ. ಅಂದಾಜು ನಷ್ಟ :ಭೀಕರ ಪ್ರವಾಹದಿಂದ ಜಿಲ್ಲೆಯಲ್ಲಿ ಈವರೆಗೆ 825 ಕೋಟಿ ರೂ.ಗಿಂತ ಅಧಿಕ ನಷ್ಟವಾಗಿದೆ ಎಂದು ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ನಡೆಸಿದ ಕೃಷಿ ಬೆಳೆ ನಷ್ಟವೇ 636 ಕೋಟಿ ರೂ. ಎಂದು ಅಂದಾಜಿಸಿದೆ. ಕಬ್ಬು, ತೊಗರಿ, ಸೂರ್ಯಕಾಂತಿ, ಹತ್ತಿ ಸೇರಿದಂತೆ ಕೃಷಿ ಬೆಳೆ ಬೆಳೆಯಲಾಗಿತ್ತು. ಎಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಅಂದಾಜು 1, 60,739 ಲಕ್ಷ ಹೆಕ್ಟೇರ್ ಪ್ರದೇಶ ಪ್ರವಾಹಕ್ಕೆ ತುತ್ತಾಗಿದೆ. ಬೆಳೆಯ ನಷ್ಟ 636 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ತೋಟಗಾರಿಕೆ ಬೆಳೆ ಸಹ ನಷ್ಟವಾಗಿದ್ದು, 11,929 ಹೆಕ್ಟೇರ್ ಪ್ರದೇಶದ ದ್ರಾಕ್ಷಿ, ದಾಳಿಂಬೆ, ನಿಂಬು, ಮಾವಿನ ಹಣ್ಣು, ಬಾಳೆ, ಟೋಮ್ಯಾಟೊ ಸೇರಿ 156 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮಳೆಯಿಂದ ಮೂಲಸೌಕರ್ಯಗಳಾದ ವಿದ್ಯುತ್ ಕಂಬ, ಶಾಲಾ ಕಟ್ಟಡ, ಲೋಕೋಪಯೋಗಿ ಇಲಾಖೆಯ ಕಟ್ಟಡಗಳು ಸೇರಿದಂತೆ 33 ಕೋಟಿ ರೂ. ದಷ್ಟು ನಷ್ಟವಾಗಿರುವ ಕುರಿತು ಜಿಲ್ಲಾಡಳಿತ ಅಂದಾಜು ಸಿದ್ಧಪಡಿಸಿದ್ದು, ನಾಳೆ ಆಲಮಟ್ಟಿಯಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು 825 ಕೋಟಿ ರೂ.ಗಳ ಅಂದಾಜು ನಷ್ಟದ ವರದಿಯನ್ನು ಸಿಎಂಗೆ ಸಲ್ಲಿಸಲಿದ್ದಾರೆ.