ವಿಜಯಪುರ:ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ ಆಲಮಟ್ಟಿ ಜಲಾಶಯವನ್ನು 524 ಮೀಟರ್ಗೆ ಎತ್ತರಿಸಲು ಕಾನೂನಾತ್ಮಕ ಹೋರಾಟ ನಡೆದಿದೆ. ಇನ್ನು ಎರಡು, ಮೂರು ತಿಂಗಳಲ್ಲಿ ಈ ಹೋರಾಟ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರು ಗ್ರಾಮದಲ್ಲಿ ಪೀರಾಪುರ- ಬೂದಿಹಾಳ ಏತ ನೀರಾವರಿ ಯೋಜನೆ ಹಾಗೂ ಪೈಪ್ ವಿತರಣಾ ಜಾಲ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಮಾತನಾಡಿದರು. ಆಲಮಟ್ಟಿ ಜಲಾಶಯವನ್ನು 524 ಮೀಟರ್ಗೆ ಎತ್ತರಿಸಿದರೆ ನಮ್ಮ ಪಾಲಿನ 130 ಟಿಎಂಸಿ ನೀರು ಸಿಗಲಿದೆ. ಸದ್ಯ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ 50 ಸಾವಿರ ಕೋಟಿ ರೂ. ಹಣದ ಅವಶ್ಯಕತೆ ಇದೆ. ನ್ಯಾಯಾಲಯದ ಆದೇಶ ಬಂದ ಮೇಲೆ ತಕ್ಷಣ ಎಷ್ಟು ಹಣಬೇಕೋ ಅಷ್ಟು ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು.
'ರೈತ ಹಿತಕ್ಕೆ ಗಲ್ಲಿಗೇರಲು ಸಿದ್ದ': ಈ ಹಿಂದೆ ಇದೇ ಯೋಜನೆ ವಿಚಾರವಾಗಿ ಆಗಿನ ಸಿಎಂ ಎಸ್.ಎಂ.ಕೃಷ್ಣ ಕೋರ್ಟ್ಗೆ ಹೋಗಿ ಕ್ಷಮೆ ಕೇಳಿದ್ದರು ಎಂದು ಕೆಲ ನಾಯಕರು ತಮಗೆ ಹೆದರಿಸಿದ್ದರು. ನೀರಾವರಿ ಯೋಜನೆ ರೈತರ ವಿಷಯವಾಗಿರುವ ಕಾರಣ ಕ್ಷಮೆ ಅಲ್ಲ ಗಲ್ಲಿಗೇರಲು ಸಿದ್ದವಿರುವುದಾಗಿ ಅವರು ಹೇಳಿದರು.