ಕರ್ನಾಟಕ

karnataka

ETV Bharat / state

ಉಪ ಕದನ: ಸಿಂದಗಿಯಲ್ಲಿ ಸಿಎಂ ಭರ್ಜರಿ ರೋಡ್​​ ಶೋ - ಸಿಂದಗಿ ಬೈ ಎಲೆಕ್ಷನ್​ ಲೇಟೆಸ್ಟ್​ ನ್ಯೂಸ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಂದಗಿ ಮತಕ್ಷೇತ್ರದಲ್ಲಿ ಭರ್ಜರಿ ರೋಡ್​ ಶೋ ನಡೆಸಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಮತಯಾಚನೆ ಮಾಡಿದರು.

cm basavaraja bommai road show in sindagi
ರೋಡ್​​ ಶೋ

By

Published : Oct 24, 2021, 4:40 PM IST

ವಿಜಯಪುರ:ಸಿಂದಗಿ ಉಪಚುನಾವಣೆ ಕಣ ಮತ್ತಷ್ಟು ರಂಗೇರಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಂದಗಿ ಮತಕ್ಷೇತ್ರದ ಕನ್ನೊಳ್ಳಿ, ಕೊಟಕನೂರ, ಹಂದಿಗನೂರ ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

ಮೆರವಣಿಗೆಯಲ್ಲಿ ಅಭಿಮಾನಿಗಳು ಹೂಗಳನ್ನು ಚೆಲ್ಲಿ ಭರ್ಜರಿಯಾಗಿ ಸ್ವಾಗತಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಬಿಜೆಪಿ ಪರ ಘೋಷಣೆ ಕೂಗಿದರು. ಸಿಎಂ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಪರ ಮತಯಾಚನೆ ಮಾಡಿದರು. ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಬೈರತಿ ಬಸವರಾಜ, ಮಾಜಿ ಸಚಿವ ಲಕ್ಷ್ಮಣ ಸವದಿ, ಅಪ್ಪು ಪಟ್ಟಣಶೆಟ್ಟಿ ಅವರು ಸಿಎಂಗೆ ಸಾಥ್​ ನೀಡಿದರು.

ನಂತರ ಸಾರ್ವಜನಿಕರನ್ನುದ್ದೇಶಿ ತೆರದ ವಾಹನದಲ್ಲಿ ಭಾಷಣ ಮಾಡಿದ ಸಿಎಂ ಬೊಮ್ಮಾಯಿ, ಸಾಮಾಜಿಕ ನ್ಯಾಯದ ಹರಿಕಾರ ಎನ್ನುವ ಕಾಂಗ್ರೆಸ್ ಪಕ್ಷ ಯಾರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಲ್ಲ. ಸಂವಿಧಾನ ನೀಡಿದ ಬಾಬಾಸಾಹೇಬ್ ಅಂಬೇಡ್ಕರ್​ಗೆ ದೇಶ ಸದಾ ಋಣಿಯಾಗಿರಬೇಕು. ಆದರೆ ಅವರ ವಿರುದ್ಧ ಶ್ರೀಮಂತರನ್ನು ನಿಲ್ಲಿಸಿ ಚುನಾವಣೆಯಲ್ಲಿ ಸೋಲಿಸಲಾಯಿತು. ಹಾಲುಮತ ಸಮಾಜ ಇಂದಿಗೂ ಅದೇ ಸ್ಥಿತಿಯಲ್ಲಿದೆ. ಸಣ್ಣ- ಸಣ್ಣ ಕಸುಬುಗಳನ್ನು ಮಾಡುವವರು ಸಹ ಅದೇ ಸ್ಥಿತಿಯಲ್ಲಿದ್ದಾರೆ. ಅಲ್ಪಸಂಖ್ಯಾತರಿಗೆ ಈ ಹಿಂದಿನ ಸರ್ಕಾರಗಳು ಕೇವಲ ಚುನಾವಣೆಗೆ ಬಳಸಿಕೊಂಡು ಅವರನ್ನು ಅಂಧಕಾರದಲ್ಲಿಟ್ಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಸಿಂದಗಿ ಮತಕ್ಷೇತ್ರದಲ್ಲಿ ಸಿಎಂ ಭರ್ಜರಿ ರೋಡ್​​ ಶೋ

ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಮಕ್ಕಳು ಮುಂದಕ್ಕೆ ಬಂದು ಅಭಿವೃದ್ಧಿ ಹೊಂದಬೇಕಾದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಮತದಾರರು ಈ ಸಲ ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಆಗಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಕಂಬಳಿಹೊದ್ದುಕೊಳ್ಳಲು ಯೋಗ್ಯತೆ ಬೇಕು:

ಉಣ್ಣೆಯನ್ನು ನೇಯ್ದು ಕಂಬಳಿ ಮಾಡಲಾಗುತ್ತದೆ. ಇದರ ಹಿಂದೆ ಹಾಲುಮತದವರ ಗೌರವ ಮತ್ತು ಪರಿಶ್ರಮ ಅಡಗಿದೆ. ಕಂಬಳಿ ಹೊದ್ದುಕೊಳ್ಳಲು ಯೋಗ್ಯತೆ ಇರಬೇಕು ಎಂದು ಸಿದ್ದರಾಮಯ್ಯ ಅವರಿಗೆ ಸಿಎಂ ಪರೋಕ್ಷವಾಗಿ ಟೀಕಿಸಿದರು.

ಹಣ ಹಂಚುವರು ಯಾರು?

ಬಿಜೆಪಿ ಗೋಣಿ ಚೀಲದಲ್ಲಿ ಹಣ ಹಂಚುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಹಣ ಹಂಚುವ ಕೆಲಸ ಮಾಡಿದ್ದು ಕಾಂಗ್ರೆಸ್. ಅವರು ಮಾಡಿದ್ದನ್ನು, ಅವರ ಅನುಭವವನ್ನು ಹೇಳುತ್ತಿದ್ದಾರೆ. ಗೋಣಿ ಚೀಲದಲ್ಲಿ ಹಣ ತಂದು ಹಂಚಿದವರು ಅವರು. ಸೋತ ಬಳಿಕ ಬಿಜೆಪಿ ಹಣ ಬಲದಿಂದ ಗೆದ್ದಿದೆ ಎಂದು ಆರೋಪಿಸುತ್ತಾರೆ. ಈ ಬಾರಿ ಸಿಂದಗಿ ಹಾಗೂ ಹಾನಗಲ್​​ನಲ್ಲಿ ಸೋಲುವ ಮುನ್ನವೇ ಆರೋಪ ಶುರು ಮಾಡಿದ್ದಾರೆ. ಕಾಂಗ್ರೆಸ್ ನವರು ಸೋಲಿನ ಹತಾಶೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಸಿಎಂ ಲೇವಡಿ ಮಾಡಿದರು.

ಕ್ಷೇತ್ರದ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಜನರ ಆಶೀರ್ವಾದದಿಂದ ರಾಜಕೀಯದ ಚಿತ್ರಣವೇ ಬದಲಾಗಿದೆ. ಈ ಬಾರಿ ಬಿಜೆಪಿಗೆ ಮತ ನೀಡಿ. ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ರಮೇಶ ಭೂಸನೂರ 25 ಸಾವಿರ ಮತಗಳಿಂದ ಗೆಲ್ಲುವುದು ಅಷ್ಟೆ ಸತ್ಯ ಎಂದರು. ಕಳೆದ ಬಾರಿ ದಿವಂಗತ ಎಂ ಸಿ ಮನಗೂಳಿ ಕಾಕಾ ಇದ್ದರು. ಅವರ ಮೇಲಿನ ಅನುಕಂಪದಿಂದ ನೀವೆಲ್ಲ ಅವರನ್ನು ಗೆಲ್ಲಿಸಿದ್ರಿ. ಈ ಬಾರಿ ಅವರು ಇಲ್ಲ, ಬಿಜೆಪಿಗೆ ಗೆಲ್ಲಿಸಿ ಎಂದು ಮನವಿ ಮಾಡಿದರು.

ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ:

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಈ ಭಾಗದಲ್ಲಿ ನೀರಾವರಿ, ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಹಾಗೂ ವಸತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸರ್ಕಾರವು ಈ ವರ್ಷ ಹೆಚ್ಚುವರಿಯಾಗಿ 5 ಲಕ್ಷ ಮನೆಗಳನ್ನು ನಿರ್ಮಿಸಲು ಯೋಜಿಸಿದ್ದು, ಸಿಂದಗಿ ಕ್ಷೇತ್ರಕ್ಕೆ 5ಸಾವಿರ ಮನೆ ನೀಡಲಾಗುತ್ತದೆ. ಅಮೃತ ಯೋಜನೆಯಡಿಯಲ್ಲಿ 2 ಸಾವಿರ ಮನೆ ನಿರ್ಮಿಸಲಾಗುವುದು. ಹೀಗೆ 1 ವರ್ಷದಲ್ಲಿ ಸಿಂದಗಿ ಕ್ಷೇತ್ರದಲ್ಲಿ ಒಟ್ಟು 7ಸಾವಿರ ಮನೆ ನಿರ್ಮಿಣ ಮಾಡಲಾಗುವುದು ಎಂದರು.

ABOUT THE AUTHOR

...view details