ವಿಜಯಪುರ: ಕೊರೊನಾ ನಾಲ್ಕನೇ ಅಲೆ ಬಗ್ಗೆ ಹೆಚ್ಚು ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಯ ನೀಡಿದರು. ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದ ಬೂದಿಹಾಳ-ಪೀರಾಪುರ ಏತನೀರಾವರಿ ಯೋಜನೆ ಕಾಮಗಾರಿಯ ಶಂಕುಸ್ಥಾಪನೆಗೆ ಆಗಮಿಸಿದ ವೇಳೆ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೊರೊನಾ ನಾಲ್ಕನೇ ಅಲೆಯಲ್ಲಿ ಆಸ್ಪತ್ರೆಗೆ ಸೇರುವವರ ಪ್ರಮಾಣ ಜಾಸ್ತಿಯಿರುವುದಿಲ್ಲ. ಆದರೂ ಜಾಗೃತಿ ವಹಿಸಬೇಕಿದೆ ಎಂದು ಮನವಿ ಮಾಡಿದರು. ಗಡಿಗಳಲ್ಲಿ ಮುಂಜಾಗ್ರತೆ ವಹಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾಳೆ ಪ್ರಧಾನಿಯವರೊಂದಿಗೆ ಸಭೆ ಇದೆ. ಸಭೆಯ ಬಳಿಕ ಪರಿಸ್ಥಿತಿ ಅವಲೋಕಿಸಿ ನಿರ್ಣಯ ಕೈಗೊಳ್ಳಲಾಗುವುದು. ಏರ್ ಪೋರ್ಟ್, ರಾಜ್ಯದ ಗಡಿಗಳಲ್ಲಿ, ಅದರಲ್ಲೂ ಮಹಾರಾಷ್ಟ್ರ ಹಾಗೂ ಕೆರಳ ಗಡಿಯಲ್ಲಿ ಸೂಕ್ತ ಮುಂಜಾಗ್ರತೆ ವಹಿಸಲಾಗುವುದು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಹೈಕಮಾಂಡ್ ಭೇಟಿಯಾಗಿ ಸಂಪುಟ ವಿಸ್ತರಣೆ ಮಾಡಲಾಗುವುದು. ವಿಜಯಪುರ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಿಗೆ ಸಚಿವ ಸ್ಥಾನ ಲಭಿಸಿಲ್ಲ, ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗೂ ಸಮಾನ ಸ್ಥಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರೂಪದ ಬೃಹತ್ ಶಿಲಾಯುಗದ ಸಮಾಧಿ ಪತ್ತೆ!
ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದ ಹೊರ ವಲಯದ ಜಮೀನಿನಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಹೆಲಿಪ್ಯಾಡ್ ನಿನ್ನೆ ತಡರಾತ್ರಿ ಸುರಿದ ಮಳೆಯಿಂದ ಜಲಾವೃತವಾಗಿತ್ತು. ಹೀಗಾಗಿ ತಾಳಿಕೋಟೆ ಪಟ್ಟಣದಲ್ಲಿ ಸಿಎಂ ಹೆಲಿಕಾಫ್ಟರ್ ಅನ್ನು ಲ್ಯಾಂಡ್ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಕೊಡಗಾನೂರ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದ ಹೆಲಿಪ್ಯಾಡ್ನಲ್ಲೇ ಹೆಲಿಕಾಫ್ಟರ್ ಲ್ಯಾಂಡ್ ಮಾಡಲು ತೀರ್ಮಾನ ಮಾಡಲಾಯಿತು. ಅದರಂತೆ ಸುರಕ್ಷಿತವಾಗಿ ಹೆಲಿಕಾಫ್ಟರ್ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾದರು.