ವಿಜಯಪುರ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ. ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ನದಿಯ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಯಲ್ಲಿ ಇಂದು ಸಿಎಂ ಬೊಮ್ಮಾಯಿ ಅವರು ಕೃಷ್ಣೆಗೆ ಬಾಗಿನ ಅರ್ಪಿಸಲಿದ್ದಾರೆ.
ಮಹಾರಾಷ್ಟ್ರದ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯ ಅವಧಿಗೆ ಮುನ್ನವೇ ಸಂಪೂರ್ಣ ಭರ್ತಿಯಾಗಿದೆ.
519.60 ಮೀಟರ್ ಹಾಗೂ 123.081 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಇರುವ ಜಲಾಶಯದಲ್ಲಿ ಶುಕ್ರವಾರದ ವೇಳೆಗೆ 25,967 ಸಾವಿರ ಕ್ಯೂಸೆಕ್ ಒಳಹರಿವು ಇತ್ತು, 21,905 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಬಿಡಲಾಗುತ್ತಿದೆ.
ಕಳೆದ ವರ್ಷ ಇದೇ ದಿನ 517.99 ಮೀಟರ್ ನೀರು ಸಂಗ್ರಹವಾಗಿತ್ತು. ಈ ಬಾರಿ ನಿಗದಿತ ಅವಧಿಗೆ ಮುನ್ನವೇ ಜಲಾಶಯ ಭರ್ತಿಯಾದ ಕಾರಣ ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಕೃಷ್ಣೆಯ ಗಂಗಾಜಲನಿಧಿಗೆ ಗಂಗಾಪೂಜೆ ಸಲ್ಲಿಸಿ ನಂತರ ಬಾಗಿನ ಅರ್ಪಿಸಲಿದ್ದಾರೆ.