ಕರ್ನಾಟಕ

karnataka

ETV Bharat / state

ಸಂಸದೆ ಸುಮಲತಾ ಬಿಜೆಪಿ ಸೇರುವ ಮಾತುಕತೆ ನಡೆದಿದೆ: ಸಿಎಂ ಬೊಮ್ಮಾಯಿ

ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರ - ಸುಳಿವು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - ಡಿಕೆ ಶಿವಕುಮಾರ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ

cm-basavaraj-bommai-reaction-on-mp-sumalatha-joining-bjp
ಸಂಸದೆ ಸುಮಲತಾ ಬಿಜೆಪಿ ಸೇರುವ ಮಾತುಕತೆ ನಡೆದಿದೆ : ಸಿಎಂ ಬೊಮ್ಮಾಯಿ

By

Published : Mar 9, 2023, 6:20 PM IST

ಸಂಸದೆ ಸುಮಲತಾ ಬಿಜೆಪಿ ಸೇರುವ ಮಾತುಕತೆ ನಡೆದಿದೆ : ಸಿಎಂ ಬೊಮ್ಮಾಯಿ

ವಿಜಯಪುರ :ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದಷ್ಟೇ ತಿಳಿಸಿದರು.

ಇದೇ ವೇಳೆ ಆರ್​ಎಸ್ಎಸ್​ನವರಿಗೆ ಗೋಮಾಳ ಜಾಗ ನೀಡಲಾಗುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ ಸಿಎಂ, ಈ ಹಿಂದೆ ಸಿದ್ದರಾಮಯ್ಯ ಅವರು ತಮಗೆ ಬೇಕಾದ ಸಂಸ್ಥೆಗಳಿಗೆ ಜಮೀನು ನೀಡಿದ್ದಾರೆ. ಗೋಮಾಳ ಜಾಗವನ್ನು ನಾವೇನು ಕೊಟ್ಟಿಲ್ಲ. ಕಂದಾಯ ನಿವೇಶನಗಳಲ್ಲಿ ಶಿಕ್ಷಣ, ಗೋಶಾಲೆಗಳಿಗೆ ಪ್ರೋತ್ಸಾಹ ನೀಡಲು ಕೊಡಲಾಗಿದೆ. ಅದರರ್ಥ ನಾವು ಎಲ್ಲಾ ಗೋಮಾಳ ಜಮೀನು ನೀಡಿದ್ದೇವೆ ಎಂದಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರಕರಣದ ಕುರಿತಾಗಿ ಮಾತನಾಡಿದ ಅವರು, ಈಗಾಗಲೇ ನಾ‌ನು ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಲೋಕಾಯುಕ್ತ ಪೊಲೀಸರು ಈ ಪ್ರಕರಣದಲ್ಲಿ ಸರ್ವ ಸ್ವತಂತ್ರರು. ಲೋಕಾಯುಕ್ತರಿಗೆ ನಾವು ಸರ್ವ ಸ್ವಾತಂತ್ರ್ಯವನ್ನು ಕೊಟ್ಟಿದ್ದೇವೆ. ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ‌‌ ಸಲ್ಲಿಸಿದ್ದಾರೆ. ನ್ಯಾಯಾಲಯದ ತೀರ್ಮಾನಕ್ಕೆ ನಾವೆಲ್ಲಾ ತಲೆ ಬಾಗಬೇಕಾಗುತ್ತದೆ ಎಂದು ಹೇಳಿದರು.

ಪ್ರಕರಣದ ಹೆಚ್ಚಿನ ತನಿಖೆಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸುತ್ತಿದ್ದಾರೆ. ಈ ಸಂಬಂಧ ಯಾವ ವಿಷಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಈ‌ ರೀತಿ ಆಪಾದನೋ ಮಾಡುವುದರಿಂದ ಅವರು ಮಾಡಿರುವ ಭ್ರಷ್ಟಾಚಾರ ತೊಳೆದು‌ ಹೋಗಲ್ಲ. ಎಸಿಬಿಗೆ ಕೊಟ್ಟಿರುವ 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಡುತ್ತೇವೆ. ಅಲ್ಲಿ ಕಾಂಗ್ರೆಸ್​ನ ಬಣ್ಣ ಇನ್ನಷ್ಟು ಬಯಲಾಗುತ್ತದೆ ಎಂದು‌ ಹೇಳಿದರು.

ನಿರೀಕ್ಷಣಾ ಜಾಮೀನು‌ ಪಡೆದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೆರವಣಿಗೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಕುರಿತು ಇದು ಸರಿಯಲ್ಲ. ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಬಿಜೆಪಿಯ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎಂಬ ಬಿ‌ಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಸಂಸದೀಯ ಮಂಡಳಿ ಸದಸ್ಯರಿದ್ದಾರೆ. ಸಂಸದೀಯ ಮಂಡಳಿ ಸಭೆಯಲ್ಲಿ ಒಂದೊಂದು ಕ್ಷೇತ್ರದ ಕುರಿತು ಚರ್ಚೆ ಆಗುತ್ತದೆ. ಒಂದು‌ ಚುನಾವಣೆ ಇನ್ನೊಂದು ಚುನಾವಣೆಗಿಂತ ಭಿನ್ನವಾಗಿರುತ್ತದೆ. ಈ ಬಗ್ಗೆ ಸಮೀಕ್ಷೆ ಎಲ್ಲ ವಿಚಾರಗಳ ಬಗ್ಗೆ ಚಿಂತಿಸಿ ಕ್ರಮಕೈಗೊಳ್ಳಲಾಗುತ್ತದೆ. ಇದನ್ನೇ ಬಿಎಸ್​​ವೈ ಹೇಳಿದ್ದಾರೆ ಎಂದರು.

ಸಿಎಂ ಭ್ರಷ್ಟಾಚಾರದಲ್ಲಿ‌ ತೊಡಗಿದ್ದಾರೆ ಎಂಬ ಡಿಕೆಶಿ‌ ಹೇಳಿಕೆಗೆ ಪ್ರತಿಕ್ರಿಯಿಸಿ ಸಿಎಂ ಬೊಮ್ಮಾಯಿ, ಡಿಕೆಶಿಗೂ ಭ್ರಷ್ಟಾಚಾರಕ್ಕೂ ಬಿಡಲಾರದ ನಂಟು. ಮೊದಲು ಅವರು ತಮ್ಮ ಮೇಲಿರೋ ಆರೋಪಕ್ಕೆ ಉತ್ತರ ನೀಡಲಿ ಎಂದು‌ ಟೀಕಿಸಿದರು. ಸಿ ಟಿ‌ ರವಿ‌ ಉಗ್ರ ಎಂಬ ಕಾಂಗ್ರೆಸ್ ಮುಖಂಡರ‌‌ ಹೇಳಿಕೆಗೆ ಮಾತನಾಡಿ, ಕಾಂಗ್ರೆಸ್‌ನವರಿಗೆ ದೇಶ ಭಕ್ತರು ಉಗ್ರರ ಹಾಗೆ ಕಾಣುತ್ತಾರೆ. ನಮಗೆ ದೇಶದ್ರೋಹಿಗಳು ಉಗ್ರರ ಹಾಗೆ ಕಾಣುತ್ತಾರೆ ಎಂದು‌ ಹೇಳಿದರು.

ಇದೇ ವೇಳೆ ಕೃಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡಿದ ಸಿಎಂ, 3 ನೇ ಹಂತದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪೂರ್ಣಗೊಂಡರೆ ಕೃಷ್ಣಾ ಮೇಲ್ದಂಡೆ 3 ನೇ ಹಂತದ ಕೆಲಸಗಳನ್ನು ಮಾಡಬಹುದು. ಜೊತೆಗೆ ಆಲಮಟ್ಟಿ ಎತ್ತರ ಹೆಚ್ಚಿಸಿ ನೀರು ಸಂಗ್ರಹ ಮಾಡಬಹುದು ಎಂದು ಹೇಳಿದರು. 3 ನೇ ಹಂತದ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಕೆಲಸಕ್ಕೆ ಪ್ರಮುಖ ನಿರ್ಣಯ ತೆಗೆದುಕೊಂಡು ಭೂ ಸ್ವಾಧೀನ ಮತ್ತು ಪುನರ್ವಸತಿಗೆ ಜಮೀನಿಗೆ ದರ ನಿಗದಿ ಮಾಡಿ ಇಂದು ಸವಲತ್ತು ವಿತರಣೆ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ :ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ

ABOUT THE AUTHOR

...view details