ಮುದ್ದೇಬಿಹಾಳ:ಪಟ್ಟಣದ ಬಸ್ ನಿಲ್ದಾಣದ ಎದುರಿಗಿರುವ ಫುಟ್ಪಾತ್ ಅತಿಕ್ರಮಿಸಿದ್ದ ಗೂಡಂಗಡಿಗಳನ್ನು ಪುರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು.
ಫುಟ್ಪಾತ್ ಅತಿಕ್ರಮಿಸಿ, ಬಸ್ ನಿಲ್ದಾಣದ ಅಂದಗೆಡಿಸಿದ್ದ ಗೂಡಂಗಡಿಗಳ ತೆರವು
ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಅತಿ ಕಿರಿದಾದ ಫುಟ್ಪಾತ್ ನಲ್ಲೇ ಹಾಕಿಕೊಂಡಿದ್ದ ಗೂಡಂಗಡಿಗಳು ಬಸ್ ನಿಲ್ದಾಣದ ಅಂದ ಕೆಡಿಸಿದ್ದವು. ಇವುಗಳಿಂದಾಗಿ ಪಾದಚಾರಿಗಳಿಗೂ ಓಡಾಡಲು ಜಾಗವಿರಲಿಲ್ಲ. ಈ ಹಿನ್ನಲೆಯಲ್ಲಿ ಇಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ನೇತೃತ್ವದಲ್ಲಿ ಜೆಸಿಬಿ ಮೂಲಕ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.
ತೆರವು ಕಾರ್ಯಾಚರಣೆ ವೇಳೆ ಕೆಲವು ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಮುಂಚಿತವಾಗಿ ಸೂಚನೆ ನೀಡಿದ್ದಿದ್ದರೆ ನಾವೇ ಅಂಗಡಿಗಳನ್ನು ತೆರವು ಮಾಡಿಕೊಳ್ಳುತ್ತಿದ್ದೆವು. ಈ ರೀತಿ ದಿಢೀರ್ ಬಂದು ನಮ್ಮ ಬದುಕಿಗೆ ಆಸರೆಯಾಗಿರುವ ಅಂಗಡಿಗಳನ್ನು ಏಕಾಏಕಿ ಕಿತ್ತೆಸೆದರೆ ಆಗುವ ನಷ್ಟವನ್ನು ಯಾರು ತುಂಬಿ ಕೊಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಾಧಿಕಾರಿ ಗೋಪಾಲ ಕಾಸೆ, ನಾವು ಬೀದಿ ಬದಿ ಕುಳಿತು ಸಣ್ಣ ಡಬ್ಬಗಳಲ್ಲಿ ಹಣ್ಣು, ಕಾಯಿ, ಹೂ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದೇವೆ. ಆದರೆ, ಇಡೀ ಫುಟ್ಪಾತ್ ಅತಿಕ್ರಮಿಸಿ ಬಸ್ ನಿಲ್ದಾಣವೇ ಕಾಣದಂತೆ ಮಾಡಿರುವುದು ತಪ್ಪು. ಇದರಿಂದ ಬಸ್ ನಿಲ್ದಾಣದ ಅಂದವೂ ಹಾಳು, ಪಾದಚಾರಿಗಳಿಗೂ ನಡೆದಾಡಲು ಸಮಸ್ಯೆ. ಹೀಗಾಗಿ ಅತಿಕ್ರಮಣ ಮಾಡಿದ ಜಾಗವನ್ನು ತೆರವು ಮಾಡಿದ್ದೇವೆ. ಮುಂದೆಯೂ ಇದು ಹೀಗೆಯೇ ಮುಂದುವರೆದರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಹೇಳಿದರು.