ವಿಜಯಪುರ: ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ಗೇಟ್ನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಡ್ಡಾಯ ಫಾಸ್ಟ್ ಟ್ಯಾಗ್ ಪದ್ಧತಿ ಮೊದಲ ದಿನವೇ ಹಲವು ಗೊಂದಲಗಳಿಗೆ ಕಾರಣವಾಗಿದೆ. ಇದರ ನಡುವೆ ನಿಂತ ಸ್ಥಳದಲ್ಲಿಯೇ ಫಾಸ್ಟ್ ಟ್ಯಾಗ್ ಕಾರ್ಡ್ ವಿತರಿಸುವ ಕಾರ್ಯವನ್ನು ಸಹ ರಾಷ್ಡ್ರೀಯ ಹೆದ್ದಾರಿ ಪ್ರಾಧಿಕಾರ ಮಾಡುತ್ತಿದೆ.
ಟೋಲ್ಗೇಟ್ನಲ್ಲಿ ಇಂದಿನಿಂದ ನಗದು ರಹಿತ ಫಾಸ್ಟ್ ಟ್ಯಾಗ್ ಪದ್ಧತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಿದ ಕಾರಣ ಬೆಂಗಳೂರು - ವಿಜಯಪುರ ರಾಜ್ಯ ಹೆದ್ದಾರಿ 50ರ ಟೋಲ್ ಗೇಟ್ನಲ್ಲಿ ಬೆಳಗ್ಗೆಯಿಂದಲೇ ಹತ್ತು ಹಲವು ಗೊಂದಲಗಳು ಉಂಟಾಗಿದ್ದವು. ಹಣ ನೀಡಿ ಹೆದ್ದಾರಿ ಪ್ರಯೋಜನ ಪಡೆಯುತ್ತಿದ್ದ ವಾಹನ ಚಾಲಕರು ಇಂದು ಫಾಸ್ಟ್ ಟ್ಯಾಗ್ ಇಲ್ಲದೇ ಪರದಾಡಬೇಕಾಯಿತು.
ಇದೇ ವೇಳೆ ಕಂದಾಯ ಅಧಿಕಾರಿಯೊಬ್ಬರ ಕಾರು ಚಾಲಕ ಎನ್ಎಚ್ಎಎಲ್ ಸಿಬ್ಬಂದಿ ಜೊತೆ ಸುಮಾರು ಹೊತ್ತು ವಾಗ್ದಾದ ನಡೆಸಿದರು. ಇದು ಸರ್ಕಾರಿ ಕಚೇರಿ ವಾಹನ, ಹಾಗಾಗಿ ಇದಕ್ಕೆ ಫಾಸ್ಟ್ ಟ್ಯಾಗ್ ಅನ್ವಯವಾಗುವದಿಲ್ಲ ಎಂದು ವಾದಿಸಿದರು. ಅದು ಫಲಿಸದಿದ್ದಾಗ ತನ್ನ ಬಳಿ ಇದ್ದ ಫಾಸ್ಟ್ ಟ್ಯಾಗ್ ಕಾರ್ಡ್ ತೋರಿಸಿದ್ದು, ಅದರಲ್ಲಿ ಬ್ಯಾಲೆನ್ಸ್ ಇರಲಿಲ್ಲ. ಇಷ್ಟಾದರೂ ವಾಗ್ವಾದಕ್ಕಿಳಿದಿದ್ದ ಚಾಲಕ ತಮ್ಮದೇ ಸರಿ ಎನ್ನುವಂತೆ ವಾದಿಸಿದ್ದು, ಇದಕ್ಕೆ ಸೊಪ್ಪು ಹಾಕದ ಸಿಬ್ಬಂದಿ ಕೊನೆಗೂ ದುಪ್ಪಟ್ಟು ಹಣ ಪಡೆದು ವಾಹನ ಬಿಟ್ಟುಕಳುಹಿಸಿದರು.
ಈ ಸುದ್ದಿಯನ್ನೂ ಓದಿ:ಟೋಲ್ಗೇಟ್ಗಳಲ್ಲಿ ಫಾಸ್ಟ್ಟ್ಯಾಗ್ ಕಡ್ಡಾಯ.. ಹೈರಾಣಾದ ವಾಹನ ಸವಾರರು!
ಟೋಲ್ ಗೇಟ್ ಬರುವ ಮುನ್ನವೇ ಟೋಲ್ ಸಿಬ್ಬಂದಿ ವಾಹನಗಳನ್ನು ತಡೆದು ಫಾಸ್ಟ್ ಟ್ಯಾಗ್ ಹೊಂದಿರುವ ವಾಹನಗಳನ್ನು ಬಿಟ್ಟು ಉಳಿದ ವಾಹನಗಳನ್ನು ತಡೆದು ವಿಚಾರಣೆ ನಡೆಸಿದರು. ಇದರ ಜೊತೆ ಕೆಲ ಪ್ರತಿಷ್ಠಿತ ಬ್ಯಾಂಕ್ಗಳ ಎಜೆಂಟರು ಫಾಸ್ಟ್ ಟ್ಯಾಗ್ ಹೊಂದಿರದ ವಾಹನ ಚಾಲಕರು ಬಯಸಿದರೆ ಸ್ಥಳದಲ್ಲಿಯೇ ಅವರಿಗೆ ಫಾಸ್ಟ್ ಟ್ಯಾಗ್ ಕಾರ್ಡ್ ತಯಾರಿಸಿಕೊಡುವ ಕೆಲಸವನ್ನು ಸಹ ಮಾಡಿದರು.