ವಿಜಯಪುರ: ಇಳಿ ವಯಸ್ಸಿನಲ್ಲಿ ಒಟ್ಟಾಗಿ ಜೀವನ ಸಾಗಿಸಬೇಕಾದ ವೃದ್ಧ ತಂದೆ-ತಾಯಿಯನ್ನು ಮಕ್ಕಳು ಆಸ್ತಿಗಾಗಿ ದೂರ ಮಾಡಿದ್ದಾರೆನ್ನುವ ಆರೋಪ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಡೋಕಳೆ ವಾಡಿ ಗ್ರಾಮದಲ್ಲಿ ಕೇಳಿ ಬಂದಿದೆ.
ಸಹೋದರರ ನಡುವೆ ಭಿನ್ನಾಭಿಪ್ರಾಯ: ಡೋಕಳೆವಾಡಿ ಗ್ರಾಮದ ನಾರಾಯಣ ಘೇರಡೆ ಹಾಗೂ ಅಂಬಾಬಾಯಿ ಘೇರಡೆ ದಂಪತಿಗೆ ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಸೇರಿ ಒಟ್ಟು ಐವರು ಮಕ್ಕಳಿದ್ದಾರೆ. ಈಗ ಸಮಸ್ಯೆ ಎದುರಾಗಿರುವುದು ಈ ದಂಪತಿಯ ಪುತ್ರರಾದ ಸಿದ್ದು ಹಾಗೂ ಜೀವಪ್ಪಾ ಅವರ ನಡುವೆ.
ಕಿರಿಯ ಪುತ್ರನ ಆರೋಪವೇನು?: ತಂದೆ ತಾಯಿಗೆ ವಯಸ್ಸಾಗಿದೆ. ಒಂದೇ ಮನೆಯಲ್ಲಿ ಇದ್ದುಕೊಂಡು ಇಳಿ ವಯಸ್ಸು ಕಳೆಯಬೇಕಾದ ಘೇರಡೆ ದಂಪತಿಯನ್ನು ಹಿರಿಯ ಪುತ್ರ ಸಿದ್ದು ಆಸ್ತಿಗಾಗಿ ಬೇರೆ ಮಾಡಿದ್ದಾನೆ ಎಂದು ಕಿರಿಯ ಪುತ್ರ ಜೀವಪ್ಪಾ ಘೇರಡೆ ಆರೋಪ ಮಾಡಿದ್ದಾರೆ. ತಂದೆ ಹೆಸರಿನಲ್ಲಿ 30 ಎಕರೆ ಭೂಮಿ ಇರುವ ಕಾರಣ ತನ್ನ ಅಣ್ಣ ಸಿದ್ದು ಅವರು ತಂದೆ ನಾರಾಯಣನ ಘೇರಡೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ತಾಯಿ ಅಂಬಾಬಾಯಿಯನ್ನು ಬಿಟ್ಟು ಹೋಗಿದ್ದಾನೆ. ಆಕೆ ಈಗ ನನ್ನ ಮನೆಯಲ್ಲಿದ್ದಾಳೆ ಎಂದು ಕಿರಿಯ ಪುತ್ರ ಜೀವಪ್ಪ ತಿಳಿಸಿದ್ದಾರೆ.
ಪತಿಗಾಗಿ ಪತ್ನಿಯ ಕಣ್ಣೀರು:ಪತಿಯ ಜೊತೆ ಕೊನೆ ದಿನಗಳನ್ನು ಸಂತೋಷದಿಂದ ಕಳೆಯುತ್ತೇನೆ, ಪತಿಯನ್ನು ನನ್ನ ಬಳಿ ಇರುವಂತೆ ಮಾಡಿ ಎಂದು ತಾಯಿ ಅಂಬಾಬಾಯಿ ಘೇರಡೆ ಕಳೆದ ಒಂದು ತಿಂಗಳಿನಿಂದ ಕಣ್ಣೀರಿಡುತ್ತಿದ್ದಾಳೆ ಎಂದು ಜೀವಪ್ಪ ಹೇಳಿದರು.
ಕಿರಿಯ ಸಹೋದರಿಯ ಆರೋಪವಿದು:ಹಲವು ವರ್ಷಗಳಿಂದ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಹಿರಿಯ ಸಹೋದರ ಸಿದ್ದು ಘೇರಡೆ ಅವರ ಬಳಿ ಅವರ ಸಹೋದರಿ ಸಹ ಹೋಗುತ್ತಿಲ್ಲ. 'ಗ್ರಾಮದ ಜಾತ್ರೆ ಸೇರಿ ಇನ್ನಿತರೆ ಸಮಾರಂಭಗಳಿಗೆ ಗ್ರಾಮಕ್ಕೆ ಬಂದರೆ ಹಲ್ಲೆ ಮಾಡಲು ಯತ್ನಿಸುತ್ತಾರೆ. ಹೀಗಾಗಿ ಅವರ ಮನೆಗೆ ಹೋಗದೇ ತಾನು ಇನ್ನೊಬ್ಬ ಸಹೋದರ ಜೀವಪ್ಪ ಮನೆಗೆ ಹೋಗುತ್ತೇನೆ. ಇದು ಸಹ ಅವರ ಸಿಟ್ಟಿಗೆ ಕಾರಣವಾಗಿದೆ. ತಂದೆಯನ್ನು ನೋಡಲು ಬಿಡುತ್ತಿಲ್ಲ' ಎಂದು ಕಿರಿಯ ಸಹೋದರಿ ಶೋಭಾ ಅವರು ತನ್ನ ಹಿರಿಯ ಸಹೋದರ ಸಿದ್ದು ವಿರುದ್ಧ ಆರೋಪಿಸಿದ್ದಾರೆ.
ಇದನ್ನೂ ಓದಿ:ದಿಲ್ಲಿ ವರಿಷ್ಠರ ಸಭೆಯಲ್ಲಿ ರಾಜ್ಯ ನಾಯಕರಿಗೆ ಒಗ್ಗಟ್ಟಿನ ಮಂತ್ರ ಬೋಧನೆ
ಹೀಗೆ, ಆಸ್ತಿಗಾಗಿ ಸ್ವಂತ ತಂದೆ-ತಾಯಿಯನ್ನು ನನ್ನ ಸಹೋದರ ಸಿದ್ದು ಘೇರಡೆ ದೂರ ಮಾಡಿದ್ದಾರೆ ಎನ್ನುವ ಆರೋಪ ಅವರ ಕಿರಿಯ ಸಹೋದರ ಜೀವಪ್ಪನದ್ದಾಗಿದೆ. ಈ ಬಗ್ಗೆ ತಿಕೋಟಾ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದು, ಅವರೇ ನ್ಯಾಯ ಬಗೆಹರಿಸಲಿ ಎಂದು ಕುಟುಂಬಸ್ಥರು ಹೇಳಿದ್ದಾರೆ.