ವಿಜಯಪುರ: ನಡೆದಾಡುವ ದೇವರು, ಪ್ರವಚನ ವಾಗ್ಮಿ ಹಾಗು ನಾಡಿನ ಶ್ರೇಷ್ಠ ಸಂತರಾಗಿದ್ದ ಸಿದ್ದೇಶ್ವರ ಸ್ವಾಮೀಜಿ ನಿಧನರಾಗಿ ಮೂರು ದಿನ ಕಳೆದಿದೆ. ಇಂದು ಚಿತಾಭಸ್ಮದಿಂದ ಅಸ್ಥಿ ಸಂಗ್ರಹಣೆ ಕಾರ್ಯ ಮಾಡಲಾಯಿತು. ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಐದು ದೊಡ್ಡ ಮಡಿಕೆಗಳಲ್ಲಿ ಅಸ್ಥಿ ಸಂಗ್ರಹಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬಸವಲಿಂಗ ಶ್ರೀ, 'ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜ್ಯ ಗುರುದೇವರ ಚಿತಾಭಸ್ಮವನ್ನು ಅವರ ಇಚ್ಛೆಯಂತೆ ಸಂಗ್ರಹ ಮಾಡಿದ್ದೇವೆ. ಸ್ವಾಮೀಜಿಗಳ ಅಸ್ಥಿ ಸಂಗ್ರಹ ಮುಕ್ತಾಯವಾಗಿದೆ. ರವಿವಾರ 7ರಂದು ಒಂದೇ ತಂಡದಿಂದ ತ್ರಿವೇಣಿ ಸಂಗಮ ಸುಕ್ಷೇತ್ರ ಕೂಡಲಸಂಗಮ ಮತ್ತು ಗೋಕರ್ಣದಲ್ಲಿ ವಿಧಿವಿಧಾನದಂತೆ ವಿಸರ್ಜನೆ ಮಾಡಲಾಗುವುದು. ನಾಳೆ ಹುಣ್ಣಿಗೆ ಇರುವುದರಿಂದ ಚಿತಾಭಸ್ಮ ವಿಸರ್ಜನೆ ಮಾಡಲಾಗುತ್ತಿಲ್ಲ. ರವಿವಾರ ಬೆಳಗ್ಗೆ 5 ಗಂಟೆಗೆ ಆಶ್ರಮದಿಂದ ಅಸ್ತಿಯೊಂದಿಗೆ ಹೊರಡುತ್ತೇವೆ. ಸಿದ್ದೇಶ್ವರ ಅಪ್ಪನವರಿಗೆ ಕೃಷ್ಣೆಯ ಮೇಲೆ ಪ್ರೀತಿ ಇತ್ತು. ಅವರ ಆಶಯದಂತೆ ಅಸ್ಥಿ ವಿಸರ್ಜನೆ ಮಾಡಲಾಗುವುದು' ಎಂದರು.
ಶ್ರೀಗಳ ಚಿತಾಭಸ್ಮ ಭಕ್ತರಿಗೆ ನೀಡಲಾಗುವುದಿಲ್ಲ: 'ಸಿದ್ದೇಶ್ವರ ಸ್ವಾಮೀಜಿಗಳ ಆಣತಿಯಂತೆ ನಾವು ಯಾವುದೇ ಚಿತಾಭಸ್ಮವನ್ನು ಭಕ್ತರಿಗೆ ನೀಡಲ್ಲ. ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿ ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು' ಎಂದು ನಿನ್ನೆ ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ ನೀಡಿದ್ದರು.