ವಿಜಯಪುರ :ಆ ತಾಯಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ.. ಮಕ್ಕಳಿಗೂ ತಾಯಿ ಮೇಲೆ ಅಷ್ಟೇ ಪ್ರೀತಿ. ತಾಯಿ ಅಗಲಿಕೆ ಬಳಿಕ ಮಕ್ಕಳು ಮಂದಿರ ನಿರ್ಮಿಸಿ ನಿತ್ಯ ತಾಯಿಯನ್ನು ಪೂಜಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಜಾಲಗೇರಿ ಗ್ರಾಮದಲ್ಲಿ ಇಂಥದ್ದೊಂದು ತಾಯಿ ಪ್ರೀತಿಯ ಅಪರೂಪದ ಕತೆ ಕಾಣಿಸಿದೆ. ಕಳೆದ ವರ್ಷ ಮಹಾಮಾರಿ ಕೋವಿಡ್ ವೇಳೆ ಜಾಲಗೇರಿ ಗ್ರಾಮದ 68 ವರ್ಷದ ಗಜರಾಬಾಯಿ ಕಾಯಿಲೆಯಿಂದ ಅಸುನೀಗಿದ್ದರು. ಆಕೆಗಾಗಿ ಮಕ್ಕಳು ಮಂದಿರ ನಿರ್ಮಾಣ ಮಾಡಿದ್ದಾರೆ.
ಗಜರಾಬಾಯಿ ಹಾಗೂ ದುಂಡಪ್ಪ ಕಾಂಬ್ಳೆ ದಂಪತಿಗೆ ಮೂವರು ಮಕ್ಕಳು. ಗಜರಾಬಾಯಿ ಅಗಲಿಕೆಯಿಂದ ಉಂಟಾದ ನೋವನ್ನು ಮರೆಯಲು ಮಕ್ಕಳು ತಾಯಿಗಾಗಿ ಮಂದಿರ ನಿರ್ಮಿಸುವ ನಿರ್ಧಾರ ಮಾಡಿದರು. ಪುತ್ರ ಯಮನಪ್ಪ, ಪುತ್ರಿಯರಾದ ರೇಣುಕಾ, ಶಾಂತಾಬಾಯಿ ಸೇರಿ ತಾಯಿ ಮೂರ್ತಿ ಕೆತ್ತಿಸಿ ಪ್ರತಿಷ್ಠಾಪಿಸಿದ್ದಾರೆ. ಪುತ್ರ ಯಮನಪ್ಪ ನಿತ್ಯ ಎರಡು ಬಾರಿ ತಾಯಿ ಪೂಜೆ ಮಾಡ್ತಾರೆ. ಪಂಡರಾಪುರದಲ್ಲಿ ಮಾರ್ಬಲ್ ಕಲ್ಲಿನಲ್ಲಿ ಮೂರ್ತಿ ಕೆತ್ತಿಸಿದ್ದು, ಮೂರ್ತಿ ಅತ್ಯದ್ಭುತವಾಗಿ ಮೂಡಿಬಂದಿದೆ.