ವಿಜಯಪುರ:ಕಳೆದ ರಾತ್ರಿ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ವಿಚಾರ ಸೂಕ್ಷ್ಮವಾಗಿದ್ದು, ಧಾರ್ಮಿಕ ವಿಚಾರ ಬಂದಾಗ ಸಮಾಧಾನದಿಂದ ಇರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ವಿಜಯಪುರದಲ್ಲಿ ಮಾಜಿ ಸಚಿವ ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಧಾರ್ಮಿಕ ವಿಚಾರದಲ್ಲಿ ಹುಟ್ಟುವ ವಿಚಾರಗಳು ಸಾಕಷ್ಟು ಫೇಕ್ ಆಗಿರುತ್ತವೆ. ಎಲ್ಲ ಜಾತಿ ಧರ್ಮದವರು ಇಂಥವುಗಳನ್ನು ಕೂಲಂಕಷವಾಗಿ ವಿಚಾರ ಮಾಡಿ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿ ಹೇಳಿದರು. ಹುಬ್ಬಳ್ಳಿ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರೇಣುಕಾಚಾರ್ಯಗೆ ಮಾಡೋಕೆ ಕೆಲಸವಿಲ್ಲ, ಇಂಥ ಫೇಕ್ ಸುದ್ದಿ ಹರಡಿಸುವವರು ಬಿಜೆಪಿಯ ಐಟಿ ಸೆಲ್ನವರು ಎಂದು ಆರೋಪಿಸಿದರು.