ವಿಜಯಪುರ: ಭೀಮಾತೀರದ ಹಂತಕ ಧರ್ಮರಾಜ್ ಚಡಚಣನ ನಕಲಿ ಎನ್‌ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ, ಅಂದಿನ ಚಡಚಣ ಪಿಎಸ್ಐ ಗೋಪಾಲ ಹಳ್ಳೂರ, ಅಂದಿನ ಚಡಚಣ ಸಿಪಿಐ ಎಂ. ಬಿ. ಅಸೋದೆ, ಶಿವಾನಂದ ಬಿರಾದಾರ ಸೇರಿ ಈ ಕೇಸ್‌ನಲ್ಲಿ ಭಾಗಿಯಾಗಿದ್ದ ಒಟ್ಟು ಏಳು ಮಂದಿ ಇಂದು ವಿಜಯಪುರ ನ್ಯಾಯಾಲಯಕ್ಕೆ ಹಾಜರಾದರು. ಮಹಾದೇವ ಸಾಹುಕಾರ ಭೈರಗೊಂಡ, ಪಿಎಸ್ಐ ಗೋಪಾಲ ಹಳ್ಳೂರ ಹಾಗು ಶಿವಾನಂದ ಬಿರಾದಾರ ಸೇರಿ ಆರೋಪಿಗಳು ಹೆಚ್ಚುವರಿ 1ನೇ ನ್ಯಾಯಾಲಯಕ್ಕೆ ಹಾಜರಾದರು.
ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಏ.10ಕ್ಕೆ ಮುಂದೂಡಿದರು. ಆರೋಪಿಗಳ ಪರ ನ್ಯಾಯವಾದಿ ಎಸ್. ಎ. ಕೋರಿ ವಕಾಲತ್ತು ವಹಿಸಿದ್ದರು.
ವಿವರ: 2017ರ ಅಕ್ಟೋಬರ್ 30ರಂದು ಹಂತಕ ಧರ್ಮರಾಜ್ ಚಡಚಣ ನಕಲಿ ಎನ್‌ಕೌಂಟರ್ ಹಾಗೂ ಸಹೋದರ ಗಂಗಾಧರ ಚಡಚಣ ನಿಗೂಢ ಹತ್ಯೆಯು ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ನಡೆದಿತ್ತು. ಹಂತಕ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಚಡಚಣರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮೃತರ ತಾಯಿ ವಿಮಲಾಬಾಯಿ ಚಡಚಣ ಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಭೈರಗೊಂಡ ಮತ್ತು ಆತನ ಸಹಚರರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅಲೋಕ್ ಕುಮಾರ್ ಸಂಧಾನ: 40 ದಶಕಗಳಿಂದ ಭೀಮಾತೀರದ ಎರಡು ಕುಟುಂಬಗಳ ನಡುವೆ ನಡೆಯುತ್ತಿರುವ ಹಗೆತನ ತಾತ್ಕಾಲಿಕವಾಗಿ ಶಮನವಾಗಿದೆ. ಚಡಚಣ ಹಾಗೂ ಭೈರಗೊಂಡ ಕುಟುಂಬಗಳ ಬೀದಿ ಕಾಳಗದಿಂದ ಭೀಮಾ ತೀರ ರಕ್ತದ ಮಡುವಿನಲ್ಲಿ ತೊಯ್ದಿತ್ತು. ಹೇಗಾದರೂ ಮಾಡಿ ಈ ಎರಡು ಕುಟುಂಬದ ನಡುವೆ ರಾಜಿ ಸಂಧಾನ ಮಾಡಿಸಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಉತ್ತರ ವಲಯದ ಐಜಿಪಿ ಆಗಿದ್ದಾಗ ಯತ್ನಿಸಿದ್ದರು. ಅಷ್ಟೇ ಅಲ್ಲದೇ, ಎಡಿಜಿಪಿಯಾದ ಮೇಲೂ ಅವರು ಖುದ್ದು ಚಡಚಣಕ್ಕೆ ಆಗಮಿಸಿ ಎರಡು ಕುಟುಂಬಗಳ ನಡುವೆ ಸಂಧಾನ ಮಾಡಿಸಿದ್ದರು. ಈ ಬಳಿಕ ಭೀಮಾತೀರದಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗಿವೆ.
ಇದನ್ನೂ ಓದಿ:ಭೈರಗೊಂಡ ಮೇಲೆ ಶೂಟೌಟ್ ಪ್ರಕರಣ: ಆರೋಪಿಗಳು ಕೋರ್ಟ್ಗೆ ಹಾಜರಾಗುವ ವಿಡಿಯೋ ವೈರಲ್