ವಿಜಯಪುರ:ಭೀಮಾ ತೀರ ಚಡಚಣದ ವಿವಾದಿತ ಪಿಎಸ್ಐ ಮಹಾದೇವ ಯಲಿಗಾರ ಅವರನ್ನು ಅಮಾನತು ಮಾಡಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಇಂಡಿ ತಾಲೂಕಿನ ಜಿಗಜೇವಣಗಿ, ದೇವರ ನಿಂಬರಗಿಯಲ್ಲಿ ಕೊರೊನಾ ವಾರಿಯರ್ಸ್ ಕೃತಜ್ಞತಾ ಸಮಾರಂಭದಲ್ಲಿ ಪಿಎಸ್ಐಗೆ ಸನ್ಮಾನ ಮಾಡಲಾಗಿತ್ತು. ಸಾಮಾಜಿಕ ಅಂತರ ಸೇರಿದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ನಡೆದಿದ್ದ ಕಾರ್ಯಕ್ರಮ ಇದಾಗಿದ್ದರಿಂದ ಮಾಧ್ಯಮಗಳಲ್ಲಿ ಈ ಕುರಿತು ವರದಿ ಸಹ ಪ್ರಸಾರವಾಗಿತ್ತು.
ಪಿಎಸ್ಐ ಮಹಾದೇವ ಯಲಿಗಾರ ಅಮಾನತು ಅಷ್ಟೇ ಅಲ್ಲ, ಚಡಚಣ ಎಪಿಎಂಸಿ ವರ್ತಕರಿಂದ ಹಾಗೂ ವ್ಯಾಪಾರಸ್ಥರಿಂದ ಬಡವರಿಗೆ ಆಹಾರ ಹಂಚುವುದಾಗಿ ರೂ. 50000 ಬಲವಂತವಾಗಿ ಹಣ ವಸೂಲಿ ಸೇರಿದಂತೆ ಆಹಾರ ಕಿಟ್ ಪಡೆದ ಆರೋಪ ಅವರ ಮೇಲಿತ್ತು. ಇದರಿಂದ ಪೊಲೀಸ್ ಇಲಾಖೆಯ ಘನತೆಗೆ ಪೆಟ್ಟು ಬಿದ್ದಿದ್ದರಿಂದ ಎಸ್ಪಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದಕ್ಕೂ ಮುನ್ನ ಏ. 8 ರಂದು ಪಿಎಸ್ಐ ಮಹಾದೇವ ಯಲಿಗಾರ ಅವರನ್ನು ವಿಜಯಪುರ ಎಸ್ಪಿ ಕಚೇರಿಗೆ ಒಒಡಿ ಮೇಲೆ ವರ್ಗವಣೆ ಮಾಡಲಾಗಿತ್ತು. ಆದರೆ, ವರ್ಗವಣೆ ಬಳಿಕ ವಿಜಯಪುರ ಎಸ್ಪಿ ಕಚೇರಿಗೆ ಮಹಾದೇವ ಯಲಿಗಾರ ಹಾಜರಾಗಿರಲಿಲ್ಲ ಎಂಬ ಆರೋಪ ಸಹ ಕೇಳಿ ಬಂದಿತ್ತು. ಈ ಹಿನ್ನೆಲೆ ಪೊಲೀಸ್ ಇಲಾಖೆ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.