ವಿಜಯಪುರ:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂತ್ರಸ್ತ ಯುವತಿಯ ಪೋಷಕರನ್ನು ಬೆಳಗಾವಿ ಪೊಲೀಸರು ಇಂದು ಬೆಳಗಿನ ಜಾವ ಜಿಲ್ಲೆಯ ನಿಡಗುಂದಿಗೆ ಕರೆ ತಂದಿದ್ದಾರೆ.
ಸಿಡಿ ಪ್ರಕರಣ: ಸಂತ್ರಸ್ತ ಯುವತಿ ಪೋಷಕರನ್ನು ಬಿಗಿ ಭದ್ರತೆಯಲ್ಲಿ ವಿಜಯಪುರಕ್ಕೆ ಶಿಫ್ಟ್ ಮಾಡಿದ ಪೊಲೀಸ್
07:59 April 01
ಸಂತ್ರಸ್ತ ಯುವತಿಯ ಪೋಷಕರು ಬೆಳಗಾವಿಯಿಂದ ವಿಜಯಪುರಕ್ಕೆ ಶಿಫ್ಟ್
ಸಂತ್ರಸ್ತ ಯುವತಿಯ ಅಜ್ಜಿಯ ಮನೆ ನಿಡಗುಂದಿಯಲ್ಲಿದೆ. ಮಾ. 14ರಂದು ಮೊದಲು ಬಾರಿ ಯುವತಿ ಹಾಜರಾಗುವಂತೆ ಬೆಂಗಳೂರಿನ ಕಬ್ಬನ ಪಾರ್ಕ್ ಪೊಲೀಸ್ ಠಾಣಾ ಸಿಬ್ಬಂದಿ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದರು. ನಂತರ ಸಿಸಿಬಿ ಪೊಲೀಸರು ಯುವತಿ ಸಹೋದರರನ್ನು ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿ ಹೋಗಿದ್ದರು. ಆದರೆ, ಕಳೆದ ಹಲವು ದಿನಗಳಿಂದ ಮನೆ ಬಾಗಿಲು ಮುಚ್ಚಿದ ಕಾರಣ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
ಈಗ ಸಂತ್ರಸ್ತ ಯುವತಿ ನ್ಯಾಯಾಲಯಕ್ಕೆ ಹಾಜರಾದ ಕಾರಣ ಅವರ ಪೋಷಕರನ್ನು ಇಂದು ನಿಡಗುಂದಿಯ ಅಜ್ಜಿಯ ಮನೆಗೆ ಕರೆ ತಂದು ಬಿಟ್ಟಿದ್ದು, ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಮೂಲಕ ನಿಡಗುಂದಿ ಪೊಲೀಸರು ಪೋಷಕರ ಮನೆಗೆ ಭದ್ರತೆ ಒದಗಿಸಿದ್ದಾರೆ.
ಇಂದು ಬೆಂಗಳೂರಿಗೆ ತೆರಳುವ ಸಾಧ್ಯತೆ?:
ತಮ್ಮ ಮಗಳನ್ನು ತಮ್ಮ ಜೊತೆ ಕಳುಹಿಸಿ ಕೊಡಿ ಎಂದು ಅವರ ಪೋಷಕರು ಇಂದು ರಾತ್ರಿ ಬೆಂಗಳೂರಿಗೆ ತೆರಳುವ ಸಾಧ್ಯತೆಗಳಿವೆ. ನಾಳೆ ಯುವತಿಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಎದುರು ಹಾಜರಾಗಿ ತಮ್ಮ ಮಗಳನ್ನು ತಮಗೆ ಒಪ್ಪಿಸಿ ಎಂದು ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.