ವಿಜಯಪುರ :ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕೇಂದ್ರ ಸಿಬಿಐ ತಂಡ ನಗರದ ಭಾರತ ಸಂಚಾರ ನಿಗಮದ ಕಚೇರಿ ಮೇಲೆ ದಾಳಿ ನಡೆಸುವ ಮೂಲಕ ಬಿಎಸ್ಎನ್ಎಲ್ ಸಿಬ್ಬಂದಿಯ ಬೆವರಿಳಿಸಿದೆ.
ಗ್ರಾಮ ಪಂಚಾಯತ್‌ಗಳಿಗೆ ಸ್ಪೀಡ್ ಇಂಟರ್ನೆಟ್ ಪೂರೈಸುವ ಫೈಬರ್ ಕೇಬಲ ಸರಬರಾಜಿನಲ್ಲಿ ಅವ್ಯವಹಾರ ನಡೆದಿರುವ ಆರೋಪ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಇದರ ಜತೆಗೆ ಹಲವು ಇಲಾಖೆಯ ವ್ಯವಹಾರಗಳ ಮೇಲಿನ ದಾಖಲೆಗಳನ್ನು ಸಹ ಪರಿಶೀಲಿಸಲಾಗಿದೆ.
ನಗರದ ಬಸವೇಶ್ವರ ವೃತ್ತದ ಬಳಿ ಇರುವ ಬಿಎಸ್ಎನ್ಎಲ್ ಕಚೇರಿ ಮೇಲೆ ಶುಕ್ರವಾರ ಸಂಜೆ ಸಿಬಿಐನ ಮಹಿಳಾ ಅಧಿಕಾರಿ ಸೇರಿ ಐವರ ತಂಡ ಏಕಾಏಕಿ ದಾಳಿ ನಡೆಸಿತ್ತು. ಈ ವೇಳೆ ಬಹುತೇಕ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ ಮನೆಗೆ ವಾಪಸ್ ಆಗಿದ್ದರು. ಇಲಾಖೆಯ ಜನರಲ್ ಮ್ಯಾನೇಜರ್ ಹಾಗೂ ಸಹಾಯಕ ಮ್ಯಾನೇಜರ್ ಅವರ ಕೋಣೆಗೆ ತೆರಳಿ ಕಚೇರಿ ಬಾಗಿಲು ಮುಚ್ಚಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.