ವಿಜಯಪುರ:ಫೈಬರ್ ಕೇಬಲ್ ಅಳವಡಿಕೆ ವಿಚಾರದಲ್ಲಿ ಅಕ್ರಮ ನಡೆದಿರುವ ದೂರು ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ನಗರದ ಬಿಎಸ್ಎನ್ಎಲ್ ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿದ್ದು, ಕೆಲ ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ವಿಜಯಪುರದಲ್ಲಿ ಬಿಎಸ್ಎನ್ಎಲ್ ಕಚೇರಿ ಮೇಲೆ ಸಿಬಿಐ ದಾಳಿ - ಬಿಎಸ್ಎನ್ಎಲ್ ಕಚೇರಿ ಮೇಲೆ ಸಿಬಿಐ ರೇಡ್
19:35 March 19
ಫೈಬರ್ ಕೇಬಲ್ ಅಳವಡಿಕೆಯಲ್ಲಿ ಅಕ್ರಮ ಆರೋಪ
ಮಹಿಳಾ ಅಧಿಕಾರಿ ಸೇರಿ ಐವರು ಸದಸ್ಯರ ಸಿಬಿಐ ತಂಡ ರಾತ್ರಿ 9.30ರವರೆಗೆ ಕಚೇರಿಯಲ್ಲಿ ಇದ್ದು, ಹಲವು ಅಧಿಕಾರಿಗಳನ್ನು ವಿಚಾರಣೆ ನಡೆಸಿ ವಾಪಸ್ ಹಿಂದಿರುಗಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಗರದ ಬಸವೇಶ್ವರ ವೃತ್ತದ ಬಳಿ ಇರುವ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಕಚೇರಿ ಮೇಲೆ ದೆಹಲಿಯಿಂದ ಆಗಮಿಸಿರುವ ಸಿಬಿಐ ಅಧಿಕಾರಿಗಳು ಶುಕ್ರವಾರ ಸಂಜೆ 7ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ಕಚೇರಿಯ ಜನರಲ್ ಮ್ಯಾನೇಜರ್ ಅವರ ಕೋಣೆಗೆ ತೆರಳಿ ಕಚೇರಿಯ ಬಾಗಿಲು ಹಾಕಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಡಿಜಿಟೆಲ್ ಇಂಡಿಯಾ ಯೋಜನೆಯ ಫೈಬರ್ ಕೇಬಲ್ ಅಳವಡಿಕೆ ವಿಚಾರದಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ. ಪ್ರತಿ ಗ್ರಾಪಂಗೂ ಫೈಬರ್ ಕೇಬಲ್ ಸಂಪರ್ಕ ನೀಡಬೇಕಾಗಿದ್ದ ಬಿಎಸ್ಎನ್ಎಲ್ ಕೆಲವು ಪಂಚಾಯಿತಿಗಳಿಗೆ ಮಾತ್ರ ಸಂಪರ್ಕ ಕಲ್ಪಿಸಿದ್ದರು. ಬಹುತೇಕ ಪಂಚಾಯಿತಿಗಳಿಗೂ ಬಿಲ್ ಪಾವತಿ ಮಾಡಿರುವ ಹಾಗೂ ಫೈಬರ್ ಕೇಬಲ್ ಅಳವಡಿಕೆ ಗುತ್ತಿಗೆದಾರರಿಂದ ಹಣ ಪಡೆದು ಅಕ್ರಮ ಎಸಗಿರುವ ಆರೋಪದ ಮೇಲೆ ಸಿಬಿಐ ಇಂದು ದಾಳಿ ಮಾಡಿದೆ ಎನ್ನಲಾಗಿದೆ. ರಾತ್ರಿ ಸಿಬಿಐ ಅಧಿಕಾರಿಗಳು ಕಚೇರಿಯಿಂದ ನಿರ್ಗಮಿಸಿದ್ದು, ನಾಳೆಯೂ ಸಹ ದಾಳಿ ಮುಂದುವರೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: 2 ಕೋಟಿ ನಗದು, 30 ಸಾವಿರ ಸೆಟ್ ಟಾಪ್ ಬಾಕ್ಸ್ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು!