ವಿಜಯಪುರ:ರಾಜ್ಯದಲ್ಲಿ ಜಾತಿ ಜನಗಣತಿ ಜಾರಿ ಮಾಡುವಲ್ಲಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಅದನ್ನು ಬಿಜೆಪಿ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಅಧಿಕಾರ ಇದ್ದಾಗ ಮಾಡದ ಕೆಲಸವನ್ನು ಈಗ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
'ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ': ಜಾತಿ ಜನಗಣತಿ ವಿಚಾರಕ್ಕೆ ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ಗರಂ ನಗರದಲ್ಲಿ ನಡೆದ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿಣಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಿಂದುಳಿದ, ದಲಿತ ಸಮಾಜದ ಮೇಲೆ ಕಾಳಜಿ ಇಲ್ಲ. ಜಾತಿ ಜನಗಣತಿ ಜಾರಿ ಮಾಡಲು ಈಗ ಒತ್ತಾಯಿಸುತ್ತಾರೆ.
ಆದರೆ, ಅವರು ಸಿಎಂ ಇದ್ದಾಗ ಬಿಜೆಪಿ ಜಾತಿ ಜನಗಣತಿ ಬಗ್ಗೆ ಪ್ರಶ್ನಿಸಿದ್ದಾಗ ವರದಿ ಸಿದ್ದವಾಗಿದೆ. ಆದರೆ, ಇನ್ನೂ ಬೈಟಿಂಗ್ ಆಗಿಲ್ಲ ಎಂದಿದ್ದರು. ನಂತರ ಅವರ ಬೆಂಬಲದಿಂದಲೇ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಅಂದಿನ ಸಿಎಂ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ ಮೇಲೆ ಏಕೆ ಒತ್ತಡ ಹೇರಲಿಲ್ಲ ಎಂದು ಪ್ರಶ್ನಿಸಿದರು.
ಹೆಚ್ಚು ಒತ್ತಾಯ ಮಾಡಿದಾಗ ಜಾತಿ ಜನಗಣತಿ ವರದಿ ಜಾರಿ ಮಾಡಲು ಕುಮಾರಸ್ವಾಮಿ ಒಪ್ಪಲಿಲ್ಲ ಎಂದು ಉತ್ತರಿಸುತ್ತಾರೆ. ಹಾಗಿದ್ದರೆ, ನಿಮ್ಮ ಬೆಂಬಲದಿಂದ ಅವರು ಸಿಎಂ ಇರುವಾಗ ಜಾತಿ ಜನಗಣತಿ ಜಾರಿ ಮಾಡದಿದ್ದರೆ ಬೆಂಬಲ ಹಿಂಪಡೆಯಬೇಕಾಗಿತ್ತು ಎಂದರು.
ಅಧಿವೇಶನದಲ್ಲಿ ಜಾತಿ ಜನಗಣತಿ ವಿಚಾರವನ್ನು ದೊಡ್ಡದಾಗಿ ಪ್ರಸ್ತಾಪಿಸುತ್ತೇವೆ ಎಂದು ಅಧಿವೇಶನ ನಡೆಯುವ ಮುನ್ನ 15 ದಿನ ಮೊದಲೇ ಹಾರಾಡಿದ್ದರು. ಆದರೆ, ಅಧಿವೇಶನದಲ್ಲಿ ಈ ವಿಷಯವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಲೇ ಇಲ್ಲ. ಇದು ಏಕೆ? ಕೇವಲ ರಾಜಕೀಯವಾಗಿ ಹಿಂದುಳಿದ ಹಾಗೂ ದಲಿತರನ್ನು ಬಳಸಿಕೊಳ್ಳುವ ಕೆಲಸ ಕಾಂಗ್ರೆಸ್ ನಿಂದ ನಡೆಯುತ್ತಿದೆ. ಹಿಂದುಳಿದ ಆಯೋಗ ಜಾತಿ ಜನಗಣತಿ ಬಗ್ಗೆ ವರದಿ ನೀಡಿದರೆ ನಮ್ಮ ಸರ್ಕಾರ ಜಾರಿ ಮಾಡಲು ಸಿದ್ದವಿದೆ ಎಂದು ಸಿದ್ದರಾಮಯ್ಯ ಅವರಿಗೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದರು.
ಇದನ್ನೂ ಓದಿ:ಮೋದಿ ಚಿಲ್ಲರೆ ಅಲ್ಲ, ಚಿನ್ನದ ಗಟ್ಟಿ.. ಖರ್ಗೆ ಹೇಳಿಕೆಗೆ ಈಶ್ವರಪ್ಪ ತಿರುಗೇಟು