ಮುದ್ದೇಬಿಹಾಳ:ಕಾಂಗ್ರೆಸ್ನ ಬೆಂಬಲ ಹೆಚ್ಚಾಗಿದೆ ಎಂಬುದನ್ನು ತಿಳಿದುಕೊಂಡ ವಿರೋಧಿಗಳು ನಮ್ಮ ಪಕ್ಷದ ಸದಸ್ಯೆ ಲತಾ ಗೂಳಿ ಅವರಿಗೆ ಕೊಟ್ಟಿರುವ ಜಾತಿ ಪ್ರಮಾಣ ಪತ್ರವನ್ನು ರಾತ್ರೋರಾತ್ರಿ ರದ್ದುಗೊಳಿಸಿದ್ದಾರೆ. ಈ ಮೂಲಕ ಸರ್ಕಾರಿ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸುವ ಅಥವಾ ಅದನ್ನು ಮುಂದುವರೆಸುವ ಕುರಿತು ಪ್ರಕರಣವೊಂದರಲ್ಲಿ ಉಚ್ಚ ನ್ಯಾಯಾಲಯದಿಂದ ನಿರ್ದೇಶನ ಇದೆ. ಅದರಂತೆ ತಹಶೀಲ್ದಾರ್, ಉಪ ತಹಶೀಲ್ದಾರ್‌ರಿಂದ ಅನುಮೋದಿಸಿದ ಜಾತಿ ಪ್ರಮಾಣ ಪತ್ರದ ಮೇಲೆ ಯಾವುದೇ ವ್ಯಕ್ತಿ ತಕರಾರು ಸಲ್ಲಿಸಿದರೆ ಅದನ್ನು ಸೆಕ್ಷನ್ 4 ಬಿ ಪ್ರಕಾರ ಮೇಲ್ಮನವಿ ಎಂದು ಪರಿಗಣಿಸಿ ವಿಚಾರಣೆ ನಡೆಸಬಹುದಾಗಿದೆ. ಇನ್ನು ಸದರಿ ಪ್ರಮಾಣ ಪತ್ರವನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಆದೇಶ ಹೊರಡಿಸುವ ಅಧಿಕಾರ ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಆದರೆ ಇಲ್ಲಿ ಪ್ರಮಾಣ ಪತ್ರ ಕೊಟ್ಟಿರುವ ಗ್ರೇಡ್-2 ತಹಶೀಲ್ದಾರ್ ಕಾನೂನು ಬಾಹಿರವಾಗಿ ಪ್ರಮಾಣ ಪತ್ರ ರದ್ದುಗೊಳಿಸಿದ್ದಾರೆ ಎಂದು ದೂರಿದರು.