ವಿಜಯಪುರ:ಕೊರೊನಾ ಹರಡುವಿಕೆ ನಿಯಂತ್ರಿಸಲು ಗ್ರಾಮದಲ್ಲಿ ಸ್ವಯಂ ಲಾಕ್ಡೌನ್ ಮಾಡಿ, ಮರುದಿನವೇ ನೂರಾರು ಜನರು ಸೇರಿ ಜಾತ್ರೆ ಮಾಡಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದಲ್ಲಿ ನಡೆದಿದೆ.
ಸ್ವಯಂ ಲಾಕ್ಡೌನ್ ಮಾಡಿಕೊಂಡ ಮರುದಿನವೇ ಗ್ರಾಮದಲ್ಲಿ ಅದ್ದೂರಿ ಜಾತ್ರೆ
ವಿಜಯಪುರದ ಕೊಲ್ಹಾರದ ಕೂಡಗಿ ಗ್ರಾಮದ ಒಂದು ಸಮುದಾಯದ ಜನರು ಸಾಮಾಜಿಕ ಅಂತರ ಇಲ್ಲದೆ, ಅದ್ದೂರಿಯಾಗಿ ಜಾತ್ರೆ ಮಾಡುವ ಮೂಲಕ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿದ್ದಾರೆ.
ಕೂಡಗಿ ಗ್ರಾಮದ ಒಂದು ಸಮುದಾಯದ ಜನರು ನಿನ್ನೆ (ಶುಕ್ರವಾರ) ದುರ್ಗಾದೇವಿ ಮತ್ತು ಸೇವಾಲಾಲ್ ಜಾತ್ರೆ ಆಚರಿಸಿದ್ದರು. ನೂರಾರು ಜನರು ಸೇರಿದ್ದ ಜಾತ್ರೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಬಾಡೂಟ ಊಟ ಮಾಡಿ, ಜಾತ್ರೆಯಲ್ಲಿ ಸಂಭ್ರಮಿಸಿದ್ದರು. ಕೊರೊನಾ ಎಮರ್ಜನ್ಸಿಯಲ್ಲಿ ಜಾತ್ರೆ, ಸಭೆ-ಸಮಾರಂಭ, ಸಂತೆ ಮಾಡಬಾರದು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದನ್ನು ಕೂಡಗಿ ಗ್ರಾಮಸ್ಥರು ಉಲ್ಲಂಘಿಸಿದ್ದು, ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಕೊರೊನಾ ಎದುರಿಸಲು ಕೂಡಗಿ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಲಾಕ್ಡೌನ್ ಮಾಡಿಕೊಂಡಿದ್ದರು. ಇದರ ಮರುದಿನವೇ ಜಾತ್ರೆ ಆಚರಿಸಿ ತಮ್ಮದೇ ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ಅನುಪಮ್ ಅಗರವಾಲ್ ಪ್ರಕರಣ ದಾಖಲಿಸಿದ್ದಾರೆ. ಗ್ರಾಮಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.