ಮುದ್ದೇಬಿಹಾಳ:ಆಲಮಟ್ಟಿ ಎಡದಂಡೆ ಕಾಲುವೆ ವಿಭಾಗದ ಅಡಿಯಲ್ಲಿಯ ಲ್ಯಾಟ್ರಲ್ ಹಾಗೂ ಡಿಸ್ಟ್ರಿಬ್ಯೂಟರಿ ಕಾಲುವೆಗಳ ರೀ ಮಾಡಲಿಂಗ್ ಕಾಮಗಾರಿಯನ್ನು 2018-19ರಲ್ಲಿ ಟೆಂಡರ್ ಕರೆದಿದ್ದು, ಎರಡು ವರ್ಷಗಳಿಂದ ಕೆಲಸ ಮಾಡದೇ ಇರುವ ಹಿನ್ನೆಲೆಯಲ್ಲಿ ಟೆಂಡರ್ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಕೆಬಿಜೆಎನ್ಎಲ್ ಮುಖ್ಯ ಅಭಿಯಂತರರಿಗೆ ಪತ್ರ ಬರೆದಿದ್ದಾರೆ.
ಪತ್ರ ಬರೆದಿರುವ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ಕಾಮಗಾರಿಯ ಗುತ್ತಿಗೆ ಪಡೆದಿರುವ ಉದಯ ಶಿವಕುಮಾರ ಈ ಹಿಂದೆ ಸುರಪುರ, ಶಹಾಪುರಗಳಲ್ಲಿ ಮಾಡಿದ ಕಾಮಗಾರಿಗಳು ಕಳಪೆಯಾಗಿವೆ. ಹಾಗಾಗಿ ಅವರನ್ನು ಬ್ಲಾಕ್ ಲಿಸ್ಟ್ನಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ ಎಂದರು.
ಮಾಜಿ ಶಾಸಕರಿಂದ ಕೆಬಿಜೆಎನ್ಎಲ್ ಮುಖ್ಯ ಅಭಿಯಂತರರಿಗೆ ಪತ್ರ ಕಾಮಗಾರಿಯು 45 ಕೋಟಿ ರೂ. ಮೊತ್ತದ್ದಾಗಿದ್ದು, ಈಗ ರೀ ಮಾಡಲಿಂಗ್ ಕಾಮಗಾರಿ ಕೆಲಸವನ್ನು ಪ್ರಾರಂಭಿಸಲು ಗುತ್ತಿಗೆದಾರರು ನಿರ್ಧರಿಸುತ್ತಾರೆ ಎಂದು ತಿಳಿದು ಬಂದಿದೆ. ಜೂನ್ ತಿಂಗಳಲ್ಲಿ ಕಾಲುವೆಗಳಿಗೆ ನೀರು ಬಿಡುವುದರಿಂದ ಕಾಮಗಾರಿಗಳು ಅಷ್ಟು ಬೇಗನೇ ಮುಗಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಅಲ್ಲದೇ ನಿರ್ವಹಿಸುವ ಕಾಮಗಾರಿಯೂ ಸುರಕ್ಷಿತವಾಗಿರುವುದಿಲ್ಲ. ಟೆಂಡರ್ ಕರೆದು ಎರಡು ವರ್ಷ ಕಳೆದರೂ ಗುತ್ತಿಗೆದಾರರು ಕಾಮಗಾರಿಗಳನ್ನು ಏಕೆ ಪ್ರಾರಂಭಿಸಿರುವುದಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದಿದ್ದಾರೆ.
ಇನ್ನು ಈ ಕಾಮಗಾರಿಗಳ ಟೆಂಡರ್ ರದ್ದುಗೊಳಿಸಿ ಹೊಸದಾಗಿ ಟೆಂಡರ್ ಕರೆಯಬೇಕು. ಇಲ್ಲದೇ ಹೋದಲ್ಲಿ ತಮ್ಮ ಇಲಾಖೆಯ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.