ವಿಜಯಪುರ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಅನುಮಾನದ ಹುತ್ತ ಬೆಳೆದಿದೆ. ಆತ ಸಾಯಲು ಉಡುಪಿಯನ್ನೇ ಏಕೆ ಆಯ್ದುಕೊಂಡ? ವಾಟ್ಸ್‌ಆ್ಯಪ್ ಸಂದೇಶ ಸಾಯುವ ಮುನ್ನವೇ ಕಳುಹಿಸಲಾಗಿದೆಯಾ? ಅಥವಾ ರಾಜಕೀಯ ಲಾಭಕ್ಕಾಗಿ ಆತ ಸತ್ತ ಮೇಲೆ ಕಳುಹಿಸಲಾಗಿದೆಯಾ? ಹೀಗೆ ಸಾಕಷ್ಟು ಸಂದೇಹವಿದೆ. ತನಿಖೆಯಿಂದಲೇ ಸತ್ಯಾಂಶ ಹೊರ ಬರಲಿದೆಯೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಂಶಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿಜಯಪುರದಲ್ಲಿ ಮಾತನಾಡಿದ ಅವರು, ಈಶ್ವರಪ್ಪ ನೈತಿಕತೆ ಆಧಾರದ ಮೇಲೆ ರಾಜೀನಾಮೆ ನೀಡುತ್ತಿದ್ದಾರೆ. ಅವರು ಆರೋಪ ಮುಕ್ತವಾಗಿ ಹೊರ ಬರುತ್ತಾರೆನ್ನುವ ವಿಶ್ವಾಸವಿದೆ. ಈ ಕೇಸ್ನ ಸೂಕ್ತ ತನಿಖೆ ನಡೆಸಬೇಕು. ಆತನ ಸಾವು ಹೇಗೆ ಆಗಿದೆ ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಗೊತ್ತಾಗಲಿದೆ ಎಂದರು.
ಇದನ್ನೂ ಓದಿ:ತನಿಖೆ ಪೂರ್ಣಗೊಂಡು ಈಶ್ವರಪ್ಪ ಮತ್ತೊಮ್ಮೆ ಸಚಿವರಾಗುತ್ತಾರೆ : ಮಾಜಿ ಸಿಎಂ ಬಿಎಸ್ವೈ
ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಿದೆ. ಅದನ್ನು ಗೊಬ್ಬರ, ನೀರು ಹಾಕಿ ಬೆಳೆಸಿದ್ದೇ ಕಾಂಗ್ರೆಸ್. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕಬೇಕು ಎಂದರೆ ಪ್ರಧಾನಿ ಮೋದಿ ರೀತಿ ಆಡಳಿತ ವ್ಯವಸ್ಥೆ ತರಬೇಕಾಗಿದೆ ಎಂದರು. ಸಂತೋಷ್ ಪಾಟೀಲ್ ಅವರಿಗೆ ಕಾಮಗಾರಿಯ ಯಾವುದೇ ವರ್ಕ್ ಆರ್ಡರ್ ಕೊಡದೇ 4 ಕೋಟಿ ರೂ.ನಷ್ಟು ದೊಡ್ಡ ಕಾಮಗಾರಿಯನ್ನು ಯಾವ ಆಧಾರದ ಮೇಲೆ ಕೈಗೆತ್ತಿಕೊಂಡಿದ್ದರು? ಇದು ತನಿಖೆಯಿಂದ ಮಾತ್ರ ಬಯಲಾಗಲಿದೆ ಎಂದರು.
ಯತ್ನಾಳ್ ದೊಡ್ಡವರು :ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಹಾಗೂ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಇದ್ದಾರೆ ಎಂಬ ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಯತ್ನಾಳ್ ದೊಡ್ಡವರು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ನಾನು ದೊಡ್ಡವನಲ್ಲ ಎಂದರು.