ವಿಜಯಪುರ: ಇಲ್ಲಿನ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಬಾಣಂತಿಯರ ನರಳಾಟ ಪ್ರಕರಣದ ತನಿಖೆ ಸೋಮವಾರ ಚುರುಕು ಪಡೆದುಕೊಂಡಿತ್ತು. ಎಸಿ ಬಲರಾಮ ಲಮಾಣಿ ನೇತ್ವತ್ವದ ಮೂರು ಅಧಿಕಾರಿಗನ್ನೊಳಗೊಂಡ ತನಿಖಾ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪ್ರತಿಯೊಬ್ಬ ವೈದ್ಯರನ್ನು ಖುದ್ದು ವಿಚಾರಣೆಗೆ ಒಳಪಡಿಸಿದ್ದರು. ಇಂದು ಸಹ ಸಿಸೇರಿಯನ್ಗೆ ಒಳಗಾಗಿರುವ ಬಾಣಂತಿಯರ ನರಳಾಟ ಮುಂದುವರೆದಿತ್ತು.
ತನಿಖಾ ತಂಡ ಸಹ ಪ್ರಕರಣದ ಸಂಪೂರ್ಣ ಸತ್ಯಾಂಶ ತಿಳಿಯಲು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಆಸ್ಪತ್ರೆಯಲ್ಲಿ ದಾಖಲಾದ ಗರ್ಭಿಣಿಯರ ಸಂಖ್ಯೆ, ಸಿಸೇರಿಯನ್ ಮೂಲಕ ಹೆರಿಗೆಯಾದ ಬಾಣಂತಿಯರ ಸಂಖ್ಯೆಯ ಮಾಹಿತಿ ಪಡೆದುಕೊಂಡರು. 100 ಹಾಸಿಗೆಯ ಈ ಆಸ್ಪತ್ರೆ ಸದ್ಯ ಸಂಪೂರ್ಣ ಭರ್ತಿಯಾಗಿದೆ. ಆದರೂ ಬರುವ ಎಲ್ಲ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿತ್ತು.
ಸಿಜರಿಯನ್ಗೆ ಒಳಗಾದ ಬಾಣಂತಿಯರ ನರಳಾಟ, ಚುರುಕುಗೊಂಡ ತನಿಖೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡೆ: ಈ ಮಧ್ಯೆ ಆಸ್ಪತ್ರೆಗೆ ಭೇಟಿ ನೀಡಿದ ಕೆಲ ಕಾಂಗ್ರೆಸ್ ಮುಖಂಡರು ತನಿಖಾ ತಂಡವನ್ನು ಭೇಟಿಯಾಗಿ ಇಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ತೋಡಿಕೊಂಡರಲ್ಲದೇ ಆರೋಗ್ಯ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು. ಮಾತಿನ ಚಕಮಕಿ ಸಹ ನಡೆಯಿತು. ಬಾಣಂತಿಯರು ನರಳಾಡುತ್ತಿದ್ದರು, ಸಹ ತನಿಖಾ ತಂಡ ಅವರ ನೋವು ಆಲಿಸದೇ ಸಭೆ ನಡೆಸುತ್ತಿದೆ ಎಂದು ಆರೋಪಿಸಿದರು.
ಆಮ್ ಆದ್ಮಿ ಪ್ರತಿಭಟನೆ:ಆಸ್ಪತ್ರೆ ಎದುರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಿಸೇರಿಯನ್ ಎಡವಟ್ಟು ವಿರೋಧಿಸಿ ಪ್ರತಿಭಟನೆ ಮಾಡಿದರು. ಆಸ್ಪತ್ರೆ ಸಿಬ್ಬಂದಿ ರೋಗಿಗಳ ಹಾಗೂ ಅವರ ಜತೆ ಬಂದ ಸಂಬಂಧಿಕರ ಜತೆ ಅನುಚಿತವಾಗಿ ವರ್ತನೆ ತೋರುತ್ತಿದ್ದಾರೆ ಹಾಗೂ ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ವಿಜಯಪುರ : ಜಿಲ್ಲಾಸ್ಪತ್ರೆಯಲ್ಲಿ ಮುಂದುವರೆದ ಬಾಣಂತಿಯರ ಗೋಳು
ವೈದ್ಯರ ವಿಚಾರಣೆ: ನಂತರ ತನಿಖೆ ನಡೆಸುತ್ತಿರುವ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಮಾತನಾಡಿ, ಮೇ 8 ರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಜೇರಿಯನ್ ಆದ ಮಹಿಳೆಯರಲ್ಲಿ ಸೊಂಕು ಬಂದಿದೆ ಎಂಬ ಮಾಹಿತಿ ಬಂದಿದೆ. ಡಿಎಚ್ಒ ಅವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಆದರೂ ನಿನ್ನೆ ಜಿಲ್ಲಾಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಎಸಿ, ಡಿಎಚ್ಒ ಹಾಗೂ ಆರ್ಸಿಎಚ್ಒ ಅಧಿಕಾರಿಗಳ ನೇತೃತ್ವದ ತಂಡ ರಚಿಸಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಪರಿಶೀಲನೆ ನಡೆಸಬೇಕು ಎಂದು ಹೇಳಿದರು. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರತಿ ವೈದ್ಯರನ್ನು ಕರೆದು ವಿಚಾರಣೆ ಮಾಡುತ್ತಿದ್ದೇವೆ. ಕಾರಣ ತಿಳಿದುಕೊಂಡು ಡಿಸಿ ಅವರಿಗೆ ನಾಳೆ ವರದಿ ಸಲ್ಲಿಸುತ್ತೇವೆ. ಬಳಿಕ ಡಿಸಿ ಅವರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಇದನ್ನೂ ಓದಿ:ಸಿಜೇರಿಯನ್ ಒಳಗಾದ ಬಾಣಂತಿಯರ ಹೊಲಿಗೆ ಬಿಚ್ಚುತ್ತಿರುವ ಪ್ರಕರಣ.. ತನಿಖೆಗೆ ಆದೇಶಿಸಿದ ಡಿಸಿ