ವಿಜಯಪುರ : ಜಿಲ್ಲೆಗೆ ಸಚಿವ ಸ್ಥಾನ ಕೈ ತಪ್ಪಿದ್ದ ಬೆನ್ನಲ್ಲೆ ಉಸ್ತುವಾರಿ ಸಚಿವರ ಆಯ್ಕೆಯಲ್ಲೂ ಜಿಲ್ಲೆಗೆ ಸೂಕ್ತವಾದ ನಾಯಕರನ್ನು ನೀಡಿಲ್ಲ ಎಂದು ಜಿಲ್ಲಾ ಬಿಜೆಪಿಯಲ್ಲಿ ಬಿನ್ನಮತ ಮತ ಶುರುವಾಗಿದ್ದು, ಮನೆಯೊಂದು ಮೂರು ಬಾಗಿಲು ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರು ಆಯ್ಕೆಯಾಗಿದ್ದರೂ ಸಚಿವ ಸ್ಥಾನದ ಭಾಗ್ಯ ಗೋವಿಂದ ಕಾರಜೋಳ ಬಿಟ್ಟರೆ ಯಾರಿಗೂ ಲಭಿಸಿಲ್ಲ. ಹೀಗಾಗಿ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ಬಿಜೆಪಿ ಹೈ ಕಮಾಂಡ್ ಅಳೆದು ತೂಗಿ ಹೆಜ್ಜೆ ಇಟ್ಟಿದ್ದು, ಗದಗ ಜಿಲ್ಲೆಯ ನರಗುಂದ ಶಾಸಕ ಸಿ.ಸಿ.ಪಾಟೀಲರಿಗೆ ಗದಗ ಜತೆ ವಿಜಯಪುರ ಉಸ್ತುವಾರಿ ನೀಡಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮೊದಲೇ ಜಿಲ್ಲಾ ಬಿಜೆಪಿ ನಾಯಕರಲ್ಲಿ ವೈಮನಸ್ಸು ಉಂಟಾಗಿದ್ದು, ಎಲ್ಲ ಗುಂಪುಗಳನ್ನು ಒಗ್ಗೂಡಿಸಿಕೊಂಡು ಹೋಗುವ ನಾಯಕ ಉಸ್ತುವಾರಿ ಬೇಕಾಗಿತ್ತು. ಎನ್ನುವುದು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಬಯಕೆ. ಆದರೆ, ಈಗ ಗದಗ ಜಿಲ್ಲೆಯವರಿಗೆ ವಿಜಯಪುರ ಉಸ್ತುವಾರಿ ನೀಡಿದರೆ ಅವರಿಗೆ ಇಲ್ಲಿನ ಒಳ ರಾಜಕೀಯ ಹೇಗೆ ಗೊತ್ತಾಗಬೇಕು ಎಂಬುದು ಜಿಲ್ಲಾ ಬಿಜೆಪಿ ಮುಖಂಡರುಗಳಿಂದ ಕೇಳಿ ಬರುತ್ತಿರುವ ಮಾತು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಗುಂಪುಗಳ ಶೀತಲ ಸಮರದಿಂದ ರಾಜಕೀಯವಾಗಿ ಸಾಕಷ್ಟು ನಷ್ಟ ಅನುಭವಿಸಿರುವ ಜಿಲ್ಲಾ ಬಿಜೆಪಿ ಪಕ್ಷ ಮತ್ತೊಮ್ಮೆ ಪುಟಿದೇಳಬೇಕಾಗಿದೆ. ಇನ್ನೇನು ಮಹಾನಗರ ಪಾಲಿಕೆ ಚುನಾವಣೆ ಹತ್ತಿರವಾಗುತ್ತಿದೆ. ಈ ವೇಳೆ, ಎರಡು ಗುಂಪುಗಳ ನಾಯಕರನ್ನು ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿ ಉಸ್ತುವಾರಿ ಸಚಿವರ ಮುಂದಿದೆ. ಆದರೆ, ಇದು ಅವರಿಂದ ಆಗದ ಕೆಲಸ ಎಂದು ಬಿಜೆಪಿ ಕಾರ್ಯಕರ್ತರಿಗೆ ಮನವರಿಕೆಯಾದಂತಿದೆ.