ವಿಜಯಪುರ:ಬಿಜೆಪಿ ಹಿರಿಯ ಮುಖಂಡ ಹೆಚ್.ವಿಶ್ವನಾಥ್ ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ದೊರೆಯುವ ವಿಶ್ವಾಸ ತಮಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್.ವಿಶ್ವನಾಥ್ಗೆ ಸೂಕ್ತ ಸ್ಥಾನಮಾನ ಸಿಗುವ ಭರವಸೆ ಇದೆ: ಬೈರತಿ ಬಸವರಾಜ್ - ಎಚ್.ವಿಶ್ವನಾಥ್
ಹಿರಿಯ ಮುಖಂಡ ಹೆಚ್.ವಿಶ್ವನಾಥ್ ಅವರಿಗೆ ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಮುಖ್ಯಮಂತ್ರಿಗಳು ಅವಕಾಶ ಕೊಟ್ಟಿದ್ದರು. ದುರಾದೃಷ್ಟವಶಾತ್ ಅವರು ಸೋಲನುಭವಿಸಬೇಕಾಯಿತು ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು.
ವಿಜಯಪುರ ನಗರ ಪ್ರದಕ್ಷಿಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸರ್ಕಾರ ರಚನೆಗೆ ಅವರು ಶಾಸಕ ಸ್ಥಾನ ತ್ಯಾಗ ಮಾಡಿದ್ದಾರೆ. ಅವರಿಗೆ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಬೇಕಾಗಿತ್ತು, ಆದರೆ ಅದು ಕೈ ತಪ್ಪಿದೆ. ಅವರ ಬದಲಿಗೆ ನಮ್ಮ ಜತೆಗಾರರಾದ ಶಂಕರ್ ಹಾಗೂ ಎಂಟಿಬಿ ನಾಗರಾಜ ಅವರಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿದ್ದು ಶೀಘ್ರ ಸಚಿವರಾಗುವ ವಿಶ್ವಾಸವಿದೆ. ವಿಧಾನ ಪರಿಷತ್ ಸ್ಥಾನಕ್ಕೆ ಉಳಿದ ಸ್ಥಾನವನ್ನು ಪಕ್ಷದ ವರಿಷ್ಠರು ನಿಷ್ಠಾವಂತ ಕಾರ್ಯಕರ್ತರಿಗೆ ನೀಡಿದ್ದಾರೆ ಎಂದರು.
ಬಾಕಿ ಇರುವ ನಾಮನಿರ್ದೇಶನ ಸ್ಥಾನಗಳ ಪೈಕಿ ವಿಶ್ವನಾಥ್ ಅವರಿಗೆ ಸ್ಥಾನ ಕಲ್ಪಿಸಲಾಗುವುದು ಎಂದು ಸಿಎಂ ಯಡಿಯೂಪ್ಪ ಭರವಸೆ ನೀಡಿದ್ದಾರೆ ಎಂದು ಹೇಳಿದರು.