ಮುದ್ದೇಬಿಹಾಳ: ಕೆಎಸ್‌ಆರ್‌ಟಿಸಿ ನಿರ್ವಾಹಕನೊಬ್ಬ ಕಣ್ಣು ಕಾಣದ ವಿಶೇಷಚೇತನನ್ನು ಉಚಿತ ಪಾಸ್ ನಡೆಯುವುದಿಲ್ಲವೆಂದು ಮಾರ್ಗ ಮಧ್ಯೆದಲ್ಲಿಯೇ ಬಸ್‌ನಿಂದ ಕೆಳಗಿಳಿಸಿ ಅಮಾನವೀಯತೆಯಿಂದ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಸದ್ಯ ನಿರ್ವಾಹಕನನ್ನು ವಿಶೇಷಚೇತನ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದ ಬಸ್ ನಿಲ್ದಾಣದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ನಿವಾಸಿ ಸಂತೋಷ ಬಿ.ಚಲವಾದಿ ಎಂಬುವರು ಕಣ್ಣುಗಳು ಕಾಣಿಸದ ಅಂಧ ಚೇತನ. ಈತ ಸೋಮವಾರ ಬಾಗಲಕೋಟೆಯಿಂದ ಮುದ್ದೇಬಿಹಾಳಕ್ಕೆ ಬರುವುದಕ್ಕೆ ಬಾಗಲಕೋಟೆ ವಿಭಾಗದ ಬಸ್ ನಂ.ಕೆಎ-29, ಎಫ್-1444 ತನ್ನ ಸ್ನೇಹಿತನ ಜೊತೆಗೆ ಹತ್ತಿದ್ದಾನೆ. ಈ ವೇಳೆ ಬಾಗಲಕೋಟೆ ಹೊರವಲಯದ ಬಳಿ ಬಸ್ ಬಂದಾಗ ನಮ್ಮದು ಅಂಗವಿಕಲರ ಉಚಿತ ಪಾಸ್ ಇದೆ ಎಂದು ತೋರಿಸಿದ್ದಾರೆ.
ಇದಕ್ಕೆ ನಿರ್ವಾಹಕ ಬೆಲೆ ಕೊಡದೇ ನಿನ್ನ ಪಾಸ್ ನಡೆಯುವುದಿಲ್ಲ ಎಂದು ನಡುದಾರಿಯಲ್ಲಿಯೇ ಬಸ್‌ನಿಂದ ಕೆಳಗಿಳಿಸಿದ್ದಾನೆ. ಎಷ್ಟೇ ಗೋಗರೆದರೂ ಯಾರ ಬಳಿ ಹೇಳಿಕೊಳ್ಳುತ್ತಿಯೋ ಹೇಳಿಕೋ ಎಂದು ಉಡಾಫೆಯಿಂದ ವರ್ತಿಸಿದರು ಎಂದು ವಿಕಲಚೇತನ ಸಂತೋಷ ಚಲವಾದಿ ಆರೋಪಿಸಿದ್ದಾರೆ. ಕೊನೆಗೆ ಮುದ್ದೇಬಿಹಾಳಕ್ಕೆ ಬರುತ್ತಿದ್ದ ಚೇತನ ಕೆಂಧೂಳಿ ಎಂಬುವರು ಅರ್ಧ ದಾರಿಯಲ್ಲಿಯೇ ನಿಂತಿದ್ದ ವಿಕಲಚೇತನ ಸಂತೋಷ ಚಲವಾದಿ ಅವರನ್ನು ಮತ್ತೊಂದು ವಾಹನದಲ್ಲಿ ಮುದ್ದೇಬಿಹಾಳಕ್ಕೆ ಕರೆದುಕೊಂಡು ಬಂದಿದ್ದಾರೆ.