ವಿಜಯಪುರ: ಕೆಎಸ್ಆರ್ಟಿಸಿ ಬಸ್ಸು ಹಾಗೂ ಎರಡು ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿ ಮೂರು ತಿಂಗಳ ಬಾಣಂತಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 218 ರ ಕುಪ್ಪಕಡ್ಡಿ ಕ್ರಾಸ್ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಗುಲ್ಬರ್ಗಾ ಜಿಲ್ಲೆಯ ಸುನಂದಾ ಮಲ್ಲಿಕಾರ್ಜುನ ಕಲಶೆಟ್ಟಿ (25), ಸುಮನ್ (3 ತಿಂಗಳು) ಮಗು ಹಾಗೂ ಶರಣಮ್ಮ ಬಸವರಾಜ್ ಕಲಶೆಟ್ಟಿ (55) ಘಟನೆಯಲ್ಲಿ ಮೃತಪಟ್ಟ ಒಂದೇ ಕುಟುಂಬದ ದುರ್ದೈವಿಗಳು. ಅಪಘಾತದಲ್ಲಿ ಇದೇ ಕುಟುಂಬದ ಉಮೇಶ ಕಲಶೆಟ್ಟಿ ಮತ್ತು ಅವರ ಪತ್ನಿ ಸುರೇಖಾ ಕಲಶೆಟ್ಟಿ, ಮಕ್ಕಳಾದ 8 ತಿಂಗಳ ಸಮನ್ ಹಾಗೂ 2 ವರ್ಷದ ಸಾನ್ವಿ ಗಂಭೀರ ಗಾಯಗೊಂಡಿದ್ದು ಅವರನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.