ವಿಜಯಪುರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ನಿಷ್ಠಾವಂತ ನಾಯಕರು. ಅವರು ಪಕ್ಷದಿಂದ ದೂರವಿರಲು ಸಾಧ್ಯವಿಲ್ಲ. ಪಕ್ಷ ಅವರಿಗೆ ಎಲ್ಲ ಸ್ಥಾನಮಾನ ನೀಡಿದೆ. ಅದು ಅವರಿಗೂ ತೃಪ್ತಿ ಇದೆ. ನಮ್ಮ ಪಕ್ಷದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ರಾಜಕೀಯ ನಿವೃತ್ತಿ ನಿಗದಿಯಾಗಿದೆ. ಆದರೂ ಬಿಎಸ್ವೈ ಅವರಿಗೆ ಶಕ್ತಿ ಮೀರಿ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಇದು ಸಹಜವಾಗಿ ಅವರಿಗೆ ತೃಪ್ತಿ ತಂದಿದೆ ಎಂದು ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಹೇಳಿದರು.
ಬಿಎಸ್ವೈ ನಾಲ್ಕು ಬಾರಿ ಸಿಎಂ ಹುದ್ದೆ ಅಲಂಕರಿಸಿದರೂ ಒಂದು ಬಾರಿಯೂ ಐದು ವರ್ಷದ ಪೂರ್ಣಾವಧಿ ಅಧಿಕಾರ ನಡೆಸಿಲ್ಲ ಎಂಬ ಪ್ರಶ್ನೆಗೆ ನಾರಾಯಣಸ್ವಾಮಿ ಉತ್ತರಿಸಿದರು. ಅದಕ್ಕೆ ವಯೋಮಿತಿಯೇ ಕಾರಣವಾಗಿದೆ. ಅದರ ಜತೆ ಅವರು ಸಿಎಂ ಆದಾಗಿನ ಸಂದರ್ಭ ಸಹ ಕಾರಣವಾಗುತ್ತದೆ. ಅವರಿಗೆ ಇನ್ನೂ ವಯಸ್ಸು ಇದ್ದಿದ್ದರೆ, ನಮ್ಮ ಪಕ್ಷದಲ್ಲಿ ಅವರೇ ನಾಯಕರಾಗಿರುತ್ತಿದ್ದರು. ಸದ್ಯ ಅವರು ಕೇವಲ ಚುನಾವಣೆ ರಾಜಕೀಯದಿಂದ ದೂರ ಉಳಿದಿದ್ದಾರೆ, ಹೊರತು ಸಕ್ರಿಯ ರಾಜಕೀಯದಿಂದಲ್ಲ ಎಂದರು.