ವಿಜಯಪುರ :ಗ್ರಾಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದುಮುಂದೆ ನೋಡುವ ಸಮಯದಲ್ಲಿ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ.
ಸಿಎಂ ಬೊಮ್ಮಾಯಿ (CM Bommai) ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು (BS Yadiyurappa) ಹೇಳಿದರು.
ವಿಜಯಪುರದಲ್ಲಿ ನಡೆದ ಬಿಜೆಪಿ ಜನಸ್ವರಾಜ್ಯ ಯಾತ್ರೆ ಕಾರ್ಯಕ್ರಮ ವಿಜಯಪುರದಲ್ಲಿ ನಡೆದ ಬಿಜೆಪಿ ಜನಸ್ವರಾಜ್ಯ ಯಾತ್ರೆ(BJP Jana swarajya yatre)ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 140 ಸ್ಥಾನಗಳನ್ನು ಗಳಿಸಿ ಸ್ವತಂತ್ರ್ಯವಾಗಿ ಬಿಜೆಪಿ ಅಧಿಕಾರ ನಡೆಸುವಂತೆ ಮಾಡುವುದು ನನ್ನ ಗುರಿಯಾಗಿದೆ.
ಈ ನಿಟ್ಟಿನಲ್ಲಿ ಜನಸ್ವರಾಜ್ಯ ಯಾತ್ರೆ ನಡೆಸಲಾಗ್ತಿದೆ. ಮುಂದೆ ಪ್ರತಿ ಕ್ಷೇತ್ರಗಳಲ್ಲೂ ಯಾತ್ರೆ ನಡೆಸಿ ಪಕ್ಷ ಸಂಘಟನೆ ಮಾಡುತ್ತೇನೆ. ಮತ್ತೊಮ್ಮೆ ಬೊಮ್ಮಾಯಿ ನೇತೃತ್ವದಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದರು.
ವಿಧಾನ ಪರಿಷತ್ ಚುನಾವಣೆ(Legislative council election)ಯಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಪಾತ್ರ ಬಹುಮುಖ್ಯವಾಗಿರುತ್ತದೆ. ಗ್ರಾಮ ಪಂಚಾಯತ್ ಸದಸ್ಯರ ಬಗ್ಗೆ ಕೀಳು ಭಾವನೆ ಮಾಡಬಾರದು. ನಾನು ಪುರಸಭೆ ಸದಸ್ಯನಾಗಿ ಆಯ್ಕೆಯಾಗಿ ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದೇನೆ ಎಂದರು.
ಕೆಲ ವಿರೋಧಿಗಳು ಬಿಜೆಪಿ ಮುಸ್ಲಿಂ ವಿರೋಧಿ ಎಂಬ ಭಾವನೆ ಮೂಡಿಸಿವೆ. ಆದರೆ, ತಮ್ಮ ಅಧಿಕಾರವಧಿಯಲ್ಲಿ ಅಭಿವೃದ್ಧಿ ಪರ ಯೋಜನೆಗಳನ್ನು ಎಲ್ಲಾ ಸಮುದಾಯದ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಮುಂದೆಯೂ ಬಿಜೆಪಿ ಅಧಿಕಾರದಲ್ಲಿ ಎಲ್ಲಾ ಸಮುದಾಯಗಳನ್ನು ಸಮಾನ ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆ ಜಾರಿಗೊಳಿಸಲಿದೆ ಎಂದರು.
20 ಸ್ಥಾನಗಳಿಗೆ ಸ್ಪರ್ಧೆ :ವಿಧಾನ ಪರಿಷತ್ತಿನ 25 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಇದರಲ್ಲಿ 15 ಸ್ಥಾನಗಳನ್ನು ಗೆದ್ದು ಪರಿಷತ್ನಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ನಲ್ಲಿ ಬಹುಮತ ಇಲ್ಲದ ಕಾರಣ ವಿಧಾನಸಭೆಯಲ್ಲಿ ಜಾರಿ ಮಾಡಿದ ಯೋಜನೆಗಳು ಪರಿಷತ್ನಲ್ಲಿ ಮಂಜೂರು ಮಾಡುವುದು ಕಷ್ಟಕರವಾಗಿದೆ. ಈ ಬಾರಿ 15 ಸ್ಥಾನಗಳನ್ನು ಪಡೆದು ಬಹುಮತ ಸಾಧಿಸಲಿದ್ದೇವೆ ಎಂದರು.
ಬಳಿಕ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯವರು ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಪಿ.ಹೆಚ್.ಪೂಜಾರ ಅವರಿಗೆ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: 'ಮನೆಯಂಗಳದಲ್ಲಿ ಮಾತುಕತೆ'ಯಲ್ಲಿ ಹಾಜಬ್ಬ.. ಪಿಯು ಕಾಲೇಜು ತೆರೆಯುವುದೇ ತನ್ನ ಗುರಿಯೆಂದ ಅಕ್ಷರ ಸಂತ..