ಅಥಣಿ(ಬೆಳಗಾವಿ): ಕಳೆದ ಎರಡು ದಿನದ ಹಿಂದೆ ಸುರಿದ ಧಾರಾಕಾರ ಮಳೆಗೆ ತೇಲಸಂಗ ಗ್ರಾಮದ ತೋಟದ ವಸ್ತಿ ಜನಕ್ಕೆ ಸಂಪರ್ಕ ಕಲ್ಪಿಸುವ ದೋಣಿಹಳ್ಳದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಗ್ರಾಮಸ್ಥರು, ಶಾಲೆ ಮಕ್ಕಳು ಜೀವ ಪಣಕ್ಕಿಟ್ಟು ಹಳ್ಳ ದಾಟುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ- ಬಿಜ್ಜರಗಿ ರಸ್ತೆಯ ಡೋಣಿ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಭಾರಿ ಮಳೆಗೆ ಕೊಚ್ಚಿ ಹೋಗಿದ್ದು, ತೋಟದ ಕೆಲಸಕ್ಕೆ ಹೋದ ರೈತರು ಹಾಗೂ ಶಾಲೆ ಮಕ್ಕಳು ಹಗ್ಗ ಹಿಡಿದು ಹಳ್ಳ ದಾಟುವ ದುಸ್ಥಿತಿ ಬಂದೊದಗಿದೆ.
ಹಗ್ಗ ಹಿಡಿದು ಹಳ್ಳ ದಾಟಿದ ಶಾಲೆ ಮಕ್ಕಳು, ರೈತರು ಶಾಸಕ ಮಹೇಶ ಕುಮಟಳ್ಳಿ ಅವರ ಹುಟ್ಟೂರಾದ ತೇಲಸಂಗ ಗ್ರಾಮದಲ್ಲಿ ಕಳೆದ ವರ್ಷ ಗ್ರಾಮಸ್ಥರು ಹಾಗೂ ಶಾಲೆ ಮಕ್ಕಳು ಹಗ್ಗ ಹಿಡಿದು ಹಳ್ಳ ದಾಟುವಂತಾಗಿದ್ದು, ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಗ್ರಾಮ ಪಂಚಾಯಿತಿ ವತಿಯಿಂದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿ ಕೈ ತೊಳೆದುಕೊಂಡಿದ್ದರು.
ಆದರೆ ಇದೀಗ ಮೊನ್ನೆ ಸುರಿದ ಭಾರಿ ಮಳೆಗೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದು, ಮತ್ತೆ ಸ್ಥಳೀಯ ರೈತರು, ಶಾಲೆ ಮಕ್ಕಳು ಸಂಕಷ್ಟ ಪಡುವಂತಾಗಿದೆ. ಶಾಶ್ವತ ಸೇತುವೆ ನಿರ್ಮಾಣ ಮಾಡಬೇಕೆಂದು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ವಿಜಯಪುರದಲ್ಲಿ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಪರದಾಟ: ಜೀವ ಪಣಕ್ಕಿಟ್ಟು ಹಳ್ಳ ದಾಟುವ ದುಸ್ಥಿತಿ