ವಿಜಯಪುರ: ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಖ್ಯಾತೆ ವಿಚಾರವಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಹಾರಾಷ್ಟ್ರದ ವಿರುದ್ಧ ಕಿಡಿಕಾರಿದರು. ವಿಜಯಪುರದಲ್ಲಿ ಮಾತನಾಡುತ್ತಾ, ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಇದೇ ರೀತಿಯ ಖ್ಯಾತೆಯನ್ನು ಹಿಂದಿನಿಂದಲೂ ತೆಗೆದುಕೊಂಡು ಬಂದಿದೆ. ಕರ್ನಾಟಕ ಮಹಾರಾಷ್ಟ್ರ ಕನ್ನಡ ಮರಾಠಿ ಎಂಬ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಬಂದಿದ್ದಾರೆ. ಈ ಮೂಲಕ ಮಹಾರಾಷ್ಟ್ರದವರು ದೇಶದಲ್ಲಿ ಅಶಾಂತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ವೋಟ್ ಬ್ಯಾಂಕ್ಗಾಗಿ ಮಾಡುತ್ತಿರುವ ಕುತಂತ್ರ. ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ, ಎಂಇಎಸ್ ಇರಬಹುದು. ಇವರೆಲ್ಲ ವೋಟ್ಗಾಗಿ ರಾಜಕಾರಣ ಮಾಡುತ್ತಿದ್ದಾರೆ. ಮಹಾಜನ್ ಆಯೋಗದ ವರದಿ ಒಪ್ಪುವುದೇ ಇದಕ್ಕೆ ಒಂದೇ ಪರಿಹಾರ ಎಂದರು.
ಪ್ರಧಾನಿ ಮಾರ್ಗದರ್ಶನದಲ್ಲಿ ಚುನಾವಣೆ: ಗುಜರಾತ್ ಚುನಾವಣೆ ಬಗ್ಗೆ ನಡೆದಿರುವ ಸಮೀಕ್ಷೆಯಂತೆ ಬಿಜೆಪಿ ಬಹುಮತ ಸಾಧಿಸಲಿದೆ. ಇದೇ ರೀತಿ ಮುಂದೆ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನೂ ಮೋದಿ ನೇತ್ವತೃದಲ್ಲಿ ಎದುರಿಸಿ 130-40 ಸ್ಥಾನಗಳಿಸಿ ಬಹುಮತ ಸಾಧಿಸಲಿದ್ದೇವೆ. ಅವಧಿಗೂ ಮುನ್ನವೇ ಕರ್ನಾಟಕದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ ಎಂದು ಹೇಳಿದರು.