ವಿಜಯಪುರ:ವಿಶ್ವಪ್ರಸಿದ್ಧ ಗೋಳಗುಮ್ಮಟದ ಆವರಣದಲ್ಲಿರುವ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಕಚೇರಿಗೆ ಹುಸಿ ಬಾಂಬ್ ಇ-ಮೇಲ್ ಬಂದಿದೆ. ಗೋಳಗುಮ್ಮಟದ ಆವರಣದಲ್ಲಿರುವ ಮ್ಯೂಸಿಯಂನ ಆವರಣದ ಹಲವು ಕಡೆ ಬಾಂಬ್ ಇಡಲಾಗಿದೆ ಎಂಬ ಬೆದರಿಸಿ ಕಿಡಿಗೇಡಿಗಳು ಸಂದೇಶ ರವಾನಿಸಿದ್ದಾರೆ.
ಟೆರರೈಸರ್ಸ್ ಗ್ರೂಪ್ ಹೆಸರಲ್ಲಿ ಇ-ಮೇಲ್ ಸಂದೇಶ ಕಳಿಸಲಾಗಿದೆ. ಶುಕ್ರವಾರ ಸಂಜೆ ಇ-ಮೇಲ್ ಪರಿಶೀಲಿಸಿದ ಗೋಳಗುಮ್ಮಟದ ಸಿಬ್ಬಂದಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಡರಾತ್ರಿ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಬಾಂಬ್ ಪತ್ತೆ ಆಗಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸದ್ಯ ಟೆರರೈಸರ್ಸ್ ಹೆಸರಲ್ಲಿ ಬಂದ ಇ-ಮೇಲ್ ಸಂದೇಶದ ಬಗ್ಗೆ ಗೋಳಗುಮ್ಮಟ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
''ಭಾರತದ ಹಲವು ವಸ್ತುಸಂಗ್ರಹಾಲಯಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಅದರಲ್ಲಿನ ಒಂದು ಮೇಲ್ ಐಡಿ ವಿಜಯಪುರದ ಗೋಳಗುಮ್ಮಟ ಮ್ಯೂಸಿಯಂಗೂ ಬಂದಿದೆ. ಈ ಬಗ್ಗೆ ಪರಿಶೀಲಿಸಲಾಗಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ತಿಳಿದು ಬಂದಿದೆ. ಈಗಾಗಲೇ ಎನ್‌ಸಿಯನ್ನು ದಾಖಲಿಸಲಾಗಿದೆ. ನ್ಯಾಯಾಲಯದ ಅನುಮತಿಯ ನಂತರ ಎಫ್‌ಐಆರ್ ಕೂಡ ದಾಖಲಿಸಲಾಗುತ್ತದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ''. - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾತಿ ಋಷಿಕೇಶ್ ಸೋನವಾಣೆ