ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ನೂತನವಾಗಿ ಸ್ಥಾಪಿತವಾದ ಬಾಯ್ಲರ್ ಸ್ಪೋಟಗೊಂಡು ನಾಲ್ವರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನೂತನವಾಗಿ ಬಾಯ್ಲರ್ ಸ್ಥಾಪನೆ ಮಾಡಲಾಗಿತ್ತು. ನೂತನ ಬಾಯ್ಲರ್ನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡುವ ವೇಳೆ ಈ ಅವಘಡ ನಡೆದಿದೆ. ಈ ವೇಳೆ, ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳು ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಯ್ಲರ್ ಸ್ಪೋಟದಿಂದ ಕಾರ್ಖಾನೆ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಷಯವನ್ನು ಅಗ್ನಿಶಾಮಕ ದಳಕ್ಕೆ ತಿಳಿಸಲಾಗಿದ್ದು, ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. 220 ಟನ್ ಕೆಪಾಸಿಟಿಯ ಬಾಯ್ಲರ್ 51 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಪುಣೆಯ ಮೂಲದ ಎಸ್ಎಸ್ ಇಂಜೀನಿಯರ್ಸ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಅಲ್ಲದೇ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಅನ್ನು ಎಸ್ಎಸ್ ಇಂಜೀನಿಯರ್ಸ್ ಕಂಪನಿಯವರೇ ಅಳವಡಿಸಿದ್ದರು.
ಇನ್ನು ಈ ಹಿಂದೆ ದೆಹಲಿಯ ಐಎಸ್ಜಿಸಿ ಕಂಪನಿಗೆ ಬಾಯ್ಲರ್ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ಬಳಿಕ ನೀಡಿದ್ದ ಗುತ್ತಿಗೆಯನ್ನು ರದ್ದು ಪಡಿಸಿ, ಪುಣೆಯ ಮೂಲದ ಎಸ್ಎಸ್ ಇಂಜಿನಿಯರ್ಸ್ ಕಂಪನಿಗೆ ಬಾಯ್ಲರ್ ನಿರ್ಮಿಸಲು ಗುತ್ತಿಗೆ ನೀಡಲಾಗಿತ್ತು. ದೆಹಲಿಯ ಐಎಸ್ಜಿಸಿ ಕಂಪನಿಯ ಬಾಯ್ಲರ್ ಗುತ್ತಿಗೆ ರದ್ದು ಪಡಿಸಿದ್ದ ಕಾರಣ ದೆಹಲಿಯ ಕಂಪನಿಗೆ, ಸಹಕಾರಿ ಸಕ್ಕರೆ ಕಾರ್ಖಾನೆ 5 ಕೋಟಿ ರೂಪಾಯಿ ದಂಡವನ್ನು ಪಾವತಿಸಿದೆ. ಘಟನೆ ಬಳಿಕ ಕಳಪೆ ಗುಣಮಟ್ಟದ ಬಾಯ್ಲರ್ ಅಳವಡಿಕೆ ಮಾಡಿರುವ ಕುರಿತು ತನಿಖೆ ನಡೆಸಬೇಕು ಎಂದು ರೈತರ ಆಗ್ರಹಿಸಿದ್ದಾರೆ.