ವಿಜಯಪುರ: ಪವರಸ್ಟಾರ್ ಪುನೀತ್ರಾಜ್ಕುಮಾರ್ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಎರಡು ಕಣ್ಣು ದಾನ ಮಾಡುವ ಮೂಲಕ ತಂದೆ ಡಾ. ರಾಜ್ಕುಮಾರ್ ಹಾದಿಯಲ್ಲಿ ಸಾಗಿ ಮಾದರಿಯಾಗಿದ್ದಾರೆ. ಇದರಿಂದ ಪ್ರೇರೇಪಣೆಗೊಂಡ ಗುಮ್ಮಟನಗರಿ ಯುವಕರು ನೇತ್ರದಾನದ ವಾಗ್ದಾನ ಹಾಗೂ ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದ್ದಾರೆ.
ಇಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಬೆಳಗ್ಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಶುಕ್ರವಾರ ಪುನೀತ್ ನಿಧನರಾದ ಮೇಲೆ ಅವರ ಕುಟುಂಬ ವರ್ಗ ನಾರಾಯಣ ನೇತ್ರಾಲಯಕ್ಕೆ ಮಾಡಿದ್ದ ವಾಗ್ದಾನದಂತೆ ಅವರ ಕಣ್ಣನ್ನು ದಾನ ಮಾಡಲಾಯಿತು.
ಪುನೀತ್ ಅವರ ಈ ಆದರ್ಶವನ್ನೇ ಮಾದರಿ ಮಾಡಿಕೊಂಡ ಬಸವನಾಡು ವಿಜಯಪುರ ನಗರದಲ್ಲಿ ಯುವ ಭಾರತ ಸಮಿತಿ, ಮಠಪತಿ ಗಲ್ಲಿಯ ಶ್ರೀ ಆದಿಶಕ್ತಿ ತರುಣ ಸಂಘ ಹಾಗೂ ಮಠಪತಿ ಗಲ್ಲಿ ಯುವಕರ ಬಳಗದಿಂದ ಸ್ವಯಂ ಪ್ರೇರಿತ ರಕ್ತದಾನ ಹಾಗೂ ನೇತ್ರದಾನದ ವಾಗ್ದಾನ ಕಾರ್ಯಕ್ರಮ ಜರುಗಿತು.
ಈ ಶಿಬಿರದಲ್ಲಿ ಐವತ್ತಕ್ಕೂ ಹೆಚ್ಚು ಯುವಕರು ಭಾಗಿಯಾಗಿ ರಕ್ತದಾನ ಮಾಡಿದರು. ಹಾಗೂ ನೇತ್ರದಾನದ ವಾಗ್ದಾನ ಪತ್ರಕ್ಕೆ ಸಹಿ ಹಾಕಿದರು. ಇದರಲ್ಲಿ 40 ಕ್ಕೂ ಹೆಚ್ಚು ಯುವಕರು ತಮ್ಮ ಸಾವಿನ ಬಳಿಕ ನೇತ್ರದಾನ ಮಾಡುವ ವಾಗ್ದಾನ ಮಾಡಿದ್ರೆ, 35 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.