ವಿಜಯಪುರ :ಕಾಂಗ್ರೆಸ್ ದೇಶಕ್ಕೆ ನಾಲ್ಕು ಕೊಡುಗೆ ನೀಡಿದೆ. ಭಯೋತ್ಪಾದನೆ, ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಬಡತನ ಅವರ ಕೊಡುಗೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ಸಿಂದಗಿಯಲ್ಲಿ ಕೊನೆ ಹಂತದ ಬಹಿರಂಗ ಮತಯಾಚನೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲ ನೀಡಿದೆ. 60 ವರ್ಷ ಕಾಲ ದೇಶವನ್ನು ಕಾಂಗ್ರೆಸ್ ಆಡಳಿತ ನಡೆಸಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಏನಾದರೂ ಅಭಿವೃದ್ಧಿ ಮಾಡಿದ್ದರೆ, ಅದು ಜನರಿಗೆ ಹೇಳಬೇಕಾಗಿತ್ತು. ಸದ್ಯ ಎರಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಭೀತಿ ಎದುರಿಸುತ್ತಿದೆ. ಆದರೆ, ನಾವು ಅಭಿವೃದ್ಧಿ ಕೆಲಸ, ಸಮಾಜದ ಕಲ್ಯಾಣದ ಗುರಿ ಇಟ್ಟು ಕೊಂಡು ಚುನಾವಣೆಗೆ ಎದುರಿಸುತ್ತಿದ್ದೇವೆ ಎಂದ ಅವರು, ಕಾಂಗ್ರೆಸ್ ಮಾಡಿದ ಸಾಧನೆ ಹೇಳದೇ ಜಾತೀಯತೆ, ಮತೀಯ ವಿಷಯ ಇಟ್ಟುಕೊಂಡು ಚುನಾವಣೆಗೆ ಹೋಗಿದೆ ಎಂದರು.
ಟಿಪ್ಪು ಜಯಂತಿಯನ್ನು ಸೃಷ್ಟಿ ಮಾಡಿದರು, ವೀರಶೈವ ಲಿಂಗಾಯತ ಒಡೆಯುವ ಕೆಲಸ ಕಾಂಗ್ರೆಸ್ ಮಾಡಿದೆ. ಮುಂದೆ ಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿನ ಭೀತಿ ಈಗಲೇ ಎದುರಿಸುತ್ತಿದೆ ಎಂದರು. ಕಾಂಗ್ರೆಸ್‌ನವರು ಹಣ ಹಂಚಿ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿಂದಗಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತೇವೆ. ಇದರ ಆಧಾರದ ಮೇಲೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.