ವಿಜಯಪುರ : ಶಾಸಕ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ದೇಶದ ವಿರುದ್ಧ ಮಾತನಾಡುವವರಿಗೆ ಖಂಡಿತ ತೊಂದರೆ ಇದೆ, ಭಾರತದ ಪರವಾಗಿ ಇರುವವರಿಗೆ ಗೌರವ ಇದೆ. ಭಾರತದ ಅನ್ನ ತಿಂದು ಪಾಕಿಸ್ತಾನ ಪರ ಮಾತನಾಡುವರಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.
ಅಖಂಡ ಭಾರತವಾಗಲು ಪಾಕಿಸ್ತಾನದ ಮೇಲೆ ಪ್ರೀತಿ : ಹಿಜಾಬ್ ಹಾಕಿಕೊಂಡವರು ದೇಶದ ಪ್ರಧಾನಿ ಆಗಲಿದ್ದಾರೆ ಎನ್ನುವ ಓವೈಸಿ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಯತ್ನಾಳ್, ಈ ಬಗ್ಗೆ ಎಷ್ಟೋ ಮಂದಿ ದೇಶದಲ್ಲಿ ಕನಸು ಕಾಣುತ್ತಾರೆ. 2047ಕ್ಕೆ ಇಡೀ ದೇಶವನ್ನು ಇಸ್ಲಾಮಿಕ್ ಮಾಡಬೇಕು ಎಂದು ಅಂದುಕೊಂಡಿದ್ದರು. ಇದು ಯಾವ ಕಾಲಕ್ಕೂ ಸಾಧ್ಯ ಆಗಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ ಅಖಂಡ ಭಾರತದಲ್ಲಿ ಸೇರಬೇಕು. ಇದಕ್ಕಾಗಿ ಪಾಕಿಸ್ತಾನದ ಮೇಲೆ ಪ್ರೀತಿ ಇದೆ ಎಂದರು. ಇನ್ನು, ದೇಶದಲ್ಲಿ ಧರ್ಮಾಂಧತೆ ನಾಶ ಆಗಬೇಕು, ಪಾಕಿಸ್ತಾನ, ಅಫ್ಘಾನಿಸ್ತಾನ ಆದಷ್ಟು ಭಾರತದಲ್ಲಿ ಸೇರಬೇಕು ಎಂದು ಹೇಳಿದರು.
ಓವೈಸಿ ಸಹೋದರರ ವಿರುದ್ಧ ವಾಗ್ದಾಳಿ: ಇನ್ನು ಓವೈಸಿ ಸಹೋದರ, ಶಾಸಕ ಅಕ್ಬರುದ್ದೀನ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಓವೈಸಿಯ ಸಹೋದರ ಹಿಂದೂಗಳ ಕಗ್ಗೊಲೆ ಮಾಡುತ್ತೇವೆ ಎಂದು ಹೇಳುತ್ತಾರೆ. ಅಂತಹ ದುಷ್ಟ ವ್ಯಕ್ತಿಯನ್ನು ನಾವು ವಿರೋಧಿಸುತ್ತೇವೆ. ಅಲ್ಲದೆ ಓವೈಸಿ ಇಲ್ಲಿನ ಅನ್ನ, ನೀರು ಕುಡಿದು ಸುಖ ಅನುಭವಿಸುತ್ತಾರೆ. ಆದರೆ ಪಾಕಿಸ್ತಾನಕ್ಕೆ ಬೆಂಬಲವನ್ನು ಸೂಚಿಸುತ್ತಾರೆ. ಜೊತೆಗೆ ರಾಮ ಮಂದಿರ ನಾಶ ಮಾಡುತ್ತೇನೆ ಎನ್ನುತ್ತಿರುವುದು ಖಂಡನೀಯ. ಭವಿಷ್ಯದಲ್ಲಿ ಹಿಂದುತ್ವವೇ ಇಡೀ ಜಗತ್ತನ್ನು ಆಳುತ್ತದೆ ಎಂದು ಟಾಂಗ್ ಕೊಟ್ಟರು.