ವಿಜಯಪುರ :ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಏನೋ ಗಡಿಬಿಡಿ ಇದೆ ಎಂದು ಮೊದಲಿನಿಂದಲೇ ಹೇಳಿಕೊಂಡು ಬಂದಿದ್ದೇನೆ. ಇದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೇಳಿಕೆ ಪುಷ್ಟೀಕರಿಸುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ವಿಜಯಪುರ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ 40-45 ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವ ಬಿ.ಎಲ್.ಸಂತೋಷ್ ಹೇಳಿಕೆ ಸಮರ್ಥಿಸಿಕೊಂಡ ಅವರು, ನಾನು ಹೇಳಿದಂತೆ ಏನೋ ಗಡಿಬಿಡಿ ಇದೆ. ಆದರೆ ಸದ್ಯ ಅದನ್ನು ಹೇಳುವ ಪರಿಸ್ಥಿತಿಯಲ್ಲಿ ನಾನೂ ಸಹ ಇಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಜನಪ್ರತಿನಿಧಿಗಳಿಗೆ ಅಸಮಾಧಾನವಿದೆ. ಸಚಿವರು ಬೆಲೆ ಕೊಡುತ್ತಿಲ್ಲ. ಗ್ಯಾರಂಟಿ ಯೋಜನೆಗೆ ಪ್ರತಿ ತಿಂಗಳು 52 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಅದನ್ನು ಭರ್ತಿ ಮಾಡಲು ವಿವಿಧ ರೀತಿಯ ತೆರಿಗೆ ಹಾಕುತ್ತಿದ್ದಾರೆ. ಈಗಾಗಲೇ ವಿದ್ಯುತ್ ದರ ಪ್ರತಿ ಯೂನಿಟ್ಗೆ 1 ರೂ. 10 ಪೈಸೆ ಏರಿಸಲಾಗಿದೆ ಎಂದು ದೂರಿದರು.
ಸದ್ಯ ಪರಿಸ್ಥಿತಿ ನೋಡಿದರೆ ವಿರೋಧ ಪಕ್ಷದ ಶಾಸಕರಿಗೆ ಅನುದಾನ ನೀಡುವುದು ದೂರದ ಮಾತು. ತಮ್ಮ ಶಾಸಕರ ಕ್ಷೇತ್ರಕ್ಕೂ ಅನುದಾನ ನೀಡುತ್ತಿಲ್ಲ. ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಗುತ್ತಿಗೆದಾರರ ಬಿಲ್ ಸಹ ಪಾವತಿ ಮಾಡಿಲ್ಲ. ಇದೇ ವಿಷಯವನ್ನು ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ದೊಡ್ಡ ಪ್ರಚಾರ ಮಾಡಿ, ಶೇ. 40ರಷ್ಟು ಕಮಿಷನ್ ಪಡೆದುಕೊಳ್ಳುವ ಸರ್ಕಾರ ಎಂದು ಟೀಕೆ ಮಾಡಿತ್ತು. ಈಗ ಅವರ ಮೇಲೆಯೇ ಗುತ್ತಿಗೆದಾರರು ಮುಗಿಬಿದ್ದಿದ್ದಾರೆ ಎಂದು ಟೀಕಿಸಿದರು.