ಮುದ್ದೇಬಿಹಾಳ:ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಸ್ಥಾನ ನಿಭಾಯಿಸಲು ಅಸಮರ್ಥರಿದ್ದು, ಕೂಡಲೇ ಅವರನ್ನು ಬದಲಾಯಿಸುವಂತೆ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡುವುದಾಗಿ ತಾಳಿಕೋಟಿ ತಾ.ಪಂ ಅಧ್ಯಕ್ಷ ರಾಜುಗೌಡ ಕೋಳೂರ ಹೇಳಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಸ್ವಪಕ್ಷೀಯರಿಂದಲೇ ಆಕ್ರೋಶ: ಉಸ್ತುವಾರಿ ಸ್ಥಾನದಿಂದ ಬದಲಿಸಲು ಸಿಎಂಗೆ ಒತ್ತಾಯ ತಾಳಿಕೋಟಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಟಾಚಾರದ ಸಭೆಗಳನ್ನು ಮಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ತಾಳಿಕೋಟಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ಗಳನ್ನು ಹೆಚ್ಚಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು. ವೈದ್ಯರ ಕೊರತೆ ನೀಗಿಸಬೇಕು ಎಂಬುದಕ್ಕೆ ಅವರಿಂದ ಸ್ಪಂದನೆ ಸಿಕ್ಕಿಲ್ಲ ಎಂದರು.
ಅಲ್ಲದೇ, ಶಾಸಕ ನಡಹಳ್ಳಿ ಮಂಜೂರಾತಿ ತಂದಿದ್ದ ಆಕ್ಸಿಜನ್ ಪ್ಲಾಂಟ್ ಕೂಡಾ ಸ್ಥಳಾಂತರಿಸುವಲ್ಲಿ ಅವರ ಕೈವಾಡವಿದೆ ಎಂಬ ಅನುಮಾನವಿದೆ. ಕೂಡಲೇ ಅವರನ್ನು ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸದಸ್ಯ ವಾಸುದೇವ ಹೆಬಸೂರ ಮಾತನಾಡಿ, ಸಚಿವರು ಆಕ್ಸಿಜನ್ ಪ್ಲಾಂಟ್ ತಮ್ಮೂರಿಗೆ ಒಯ್ದಿದ್ದಾರೋ, ಮನೆಗೆ ಒಯ್ದಿದ್ದಾರೋ ಗೊತ್ತಿಲ್ಲ. ಸಭೆ ನಡೆಸುವ ಬಗ್ಗೆ ನಮಗೆ ಮಾಹಿತಿಯನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಓದಿ:ಅನಾಥ, ನಿರ್ಗತಿಕರಿಗೆ ಆಹಾರ, ಅಗತ್ಯ ವಸ್ತು ವಿತರಣೆ.. ಗಂಗಾವತಿಯ ಅಧಿಕಾರಿಯಿಂದ ಮಾನವೀಯ ಕಾರ್ಯ