ವಿಜಯಪುರ :ಗುಮ್ಮಟನಗರಿಯ ಎರಡು ದಶಕಗಳ ಕನಸಾಗಿದ್ದ ವಿಮಾನ ನಿಲ್ದಾಣ ಕಾಮಗಾರಿಗೆ ಕೊನೆಗೂ ಶಂಕು ಸ್ಥಾಪನೆ ನೆರವೇರಿದೆ. ಶಿವಮೊಗ್ಗದಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ ಬೆನ್ನಲ್ಲೇ, ಬಿಜೆಪಿ ಶಾಸಕರಲ್ಲಿ ಅಸಮಾಧಾನ ಬುಗಿಲೆದ್ದಿದೆ. ಸಿಎಂ ಯಡಿಯೂರಪ್ಪ ಶಿವಮೊಗ್ಗಕ್ಕೂಂದು, ವಿಜಯಪುರಕ್ಕೊಂದು ನೀತಿ ಅನುಸರಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿವೆ.
ವಿಜಯಪುರ ಹೊರವಲಯದ ಬುರಣಾಪುರ-ಮದಬಾವಿ ನಡುವಿನ 727 ಎಕರೆ ಭೂಮಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಇಂದು ವರ್ಚುವಲ್ ಕಾರ್ಯಕ್ರಮ ಮೂಲಕ ಚಾಲನೆ ನೀಡಿ, ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರವಾಸೋದ್ಯಮಕ್ಕೆ ಅವಕಾಶವಿರುವ ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವುದು ತಮ್ಮ ಕನಸಾಗಿತ್ತು.
ಇಲ್ಲಿನ ತೋಟಗಾರಿಕೆ ಬೆಳೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಉದ್ದೇಶ ಈ ವಿಮಾನ ನಿಲ್ದಾಣದಿಂದ ಸಾಕಾರಗೊಳ್ಳಲಿದೆ. ಇದಕ್ಕೆ ಸರ್ಕಾರ ಅಗತ್ಯ ಸೌಲಭ್ಯ ನೀಡಲಿದೆ ಎಂದರು. ವಿಮಾನ ನಿಲ್ದಾಣ ಕಾಮಗಾರಿ ಆರಂಭದ ಶಂಕು ಸ್ಥಾಪನೆಗೆ ಗೈರಾಗುವ ಮೂಲಕ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿಎಂ ಮೇಲಿನ ಮುನಿಸನ್ನು ಮುಂದುವರೆಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ 380 ಕೋಟಿ ರೂ. ಅನುದಾನ ಒದಗಿಸಿದರೆ, ವಿಜಯಪುರ ವಿಮಾನ ನಿಲ್ದಾಣಕ್ಕೆ ಕೇವಲ 220 ಕೋಟಿ ರೂ. ಮಾತ್ರ ಕಾಯ್ದಿರಿಸಿದ್ದಾರೆ. ಅದರಲ್ಲಿ ಕೇವಲ 95 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಚಾಲನೆ ಕಾರ್ಯಕ್ರಮ ನಿನ್ನೆ ಸಹ ಡಿಸಿಎಂ ಗೋವಿಂದ ಕಾರಜೋಳ ವಿಮಾನ ನಿಲ್ದಾಣ ಕಾಮಗಾರಿ ತಮಗೆ ತೃಪ್ತಿ ತಂದಿಲ್ಲ ಎನ್ನುವ ಮೂಲಕ ಅಸಮಾಧಾನ ಹೊರ ಹಾಕಿದ್ದರು. ಇವರ ಜತೆ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲೆಯ ವಿರೋಧ ಪಕ್ಷದ ಶಾಸಕರು ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಜಯಪುರ ಜಿಲ್ಲೆಯ ಮುಳವಾಡ ಬಳಿ ವಿಮಾನ ನಿಲ್ದಾಣ ಸ್ಥಾಪಿಸುವ ಉದ್ದೇಶವನ್ನು ಜಿಲ್ಲೆಯ ಜನಪ್ರತಿನಿಧಿಗಳು ಉದ್ದೇಶಿಸಿದ್ದರು. 2.5 ಸಾವಿರ ಎಕರೆ ಸರ್ಕಾರಿ ಭೂಮಿ ಇದ್ದು, ಮುಂದಿನ ದಿನದಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗೆ ಅವಕಾಶವಿತ್ತು.
ಆದರೆ, ಕೆಲ ಜನಪ್ರತಿನಿಧಿಗಳು ಇದಕ್ಕೆ ಅಡ್ಡಿಪಡಿಸಿದ ಕಾರಣ ಮುಳವಾಡ ಬಳಿ ವಿಮಾನ ನಿಲ್ದಾಣ ಕಾಮಗಾರಿ ಕೈ ಬಿಡಬೇಕಾಯಿತು. ಸದ್ಯ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿದೆ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ ಅಂತಾ ಸ್ಥಳೀಯರು.